
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 42ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಅಂಕ ಪಟ್ಟಿಯಲ್ಲೂ ಮಹತ್ವದ ಬದಲಾವಣೆಯಾಗಲಿದೆ.

ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದರೆ, 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಬಹುದು. ಅಲ್ಲದೆ ಪ್ಲೇಆಫ್ ಹಾದಿಯನ್ನು ಮತ್ತಷ್ಟು ಸುಲಭಗೊಳಿಸಬಹುದಾಗಿದೆ. ಹೀಗಾಗಿ ಇಂದಿನ ಪಂದ್ಯವು ಆರ್ಸಿಬಿ ಪಾಲಿಗೆ ತುಂಬಾ ಮಹತ್ವದ್ದು.

ಸದ್ಯ ಐಪಿಎಲ್ ಪಾಯಿಂಟ್ಸ್ ಟೇಬಲ್ನಲ್ಲಿ ಆರ್ಸಿಬಿ ತಂಡವು ನಾಲ್ಕನೇ ಸ್ಥಾನದಲ್ಲಿದೆ. ಆಡಿರುವ 8 ಪಂದ್ಯಗಳಲ್ಲಿ 5 ಜಯ ಹಾಗೂ 3 ಸೋಲುಗಳೊಂದಿಗೆ ರಾಯಲ್ ಪಡೆ +0.472 ನೆಟ್ ರನ್ ರೇಟ್ ಹೊಂದಿದೆ. ಇಂದು ರಾಜಸ್ಥಾನ್ ರಾಯಲ್ಸ್ ತಂಡವನ್ನು ಹೀನಾಯವಾಗಿ ಸೋಲಿಸಿದರೆ ಉತ್ತಮ ನೆಟ್ ರನ್ ರೇಟ್ನೊಂದಿಗೆ ಅಂಕ ಪಟ್ಟಿಯಲ್ಲಿ ಮೇಲೇರಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಈವರೆಗೆ 33 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಆರ್ಸಿಬಿ ತಂಡ 16 ಬಾರಿ ಗೆಲುವು ದಾಖಲಿಸಿದರೆ, ರಾಜಸ್ಥಾನ್ ರಾಯಲ್ಸ್ 14 ಬಾರಿ ಜಯ ಸಾಧಿಸಿದೆ. ಇನ್ನು ಮೂರು ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿದೆ.

ಇನ್ನು ಉಭಯ ತಂಡಗಳ ಕೊನೆಯ 5 ಮುಖಾಮಖಿಯನ್ನು ಮಾತ್ರ ತೆಗೆದುಕೊಂಡರೆ, ಆರ್ಸಿಬಿ ಮೇಲುಗೈ ಹೊಂದಿದೆ. ಕೊನೆಯ ಐದು ಮುಖಾಮುಖಿಯಲ್ಲಿ ಆರ್ಸಿಬಿ 3 ಜಯ ಸಾಧಿಸಿದರೆ, ಆರ್ಆರ್ 2 ಗೆಲುವು ದಾಖಲಿಸಿದೆ. ಅದರಲ್ಲೂ ಈ ಬಾರಿಯ ಮೊದಲ ಮುಖಾಮುಖಿಯಲ್ಲಿ ಆರ್ಆರ್ ತಂಡಕ್ಕೆ ಸೋಲುಣಿಸುವಲ್ಲಿ ಆರ್ಸಿಬಿ ಯಶಸ್ವಿಯಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವನ್ನು ಎದುರು ನೋಡಬಹುದು.