
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 60ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡದ ಯುವ ದಾಂಡಿಗ ಸಾಯಿ ಸುದರ್ಶನ್ (Sai Sudharsan) ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದೊಂದಿಗೆ ಐಪಿಎಲ್ ನೂರು ಶತಕಗಳನ್ನು ಪೂರೈಸಿದೆ. ಅಂದರೆ 2008 ರಲ್ಲಿ ಶುರುವಾದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈವರೆಗೆ 100 ಶತಕಗಳು ಮೂಡಿಬಂದಿವೆ.

ಈ ಟೂರ್ನಿಯಲ್ಲಿ ಮೊದಲ ಶತಕ ಬಾರಿಸಿದ್ದು ನ್ಯೂಝಿಲೆಂಡ್ನ ಬ್ರೆಂಡನ್ ಮೆಕಲಂ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2008ರ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೆಕೆಆರ್ ಪರ ಆರಂಭಿಕನಾಗಿ ಕಣಕ್ಕಿಳಿದ ಮೆಕಲಂ 73 ಎಸೆತಗಳಲ್ಲಿ ಅಜೇಯ 158 ರನ್ ಬಾರಿಸಿ ಐಪಿಎಲ್ ಶತಕಕ್ಕೆ ಮುನ್ನುಡಿ ಬರೆದಿದ್ದರು.

ಇನ್ನು ಐಪಿಎಲ್ನ 50ನೇ ಶತಕ ಬಾರಿಸಿದ್ದು ರಿಷಭ್ ಪಂತ್. 2018 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಡೇರ್ ಡೆವಿಲ್ಸ್ (ಡೆಲ್ಲಿ ಕ್ಯಾಪಿಟಲ್ಸ್) ಪರ ಕಣಕ್ಕಿಳಿದ ರಿಷಭ್ ಪಂತ್ 63 ಎಸೆತಗಳಲ್ಲಿ 128 ರನ್ ಬಾರಿಸಿದ್ದರು. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮೂಡಿಬಂದಿದ್ದ ಈ ಶತಕವು ಐಪಿಎಲ್ನ 50ನೇ ಸೆಂಚುರಿಯಾಗಿತ್ತು.

ಇದೀಗ ಐಪಿಎಲ್ನ 99ನೇ ಶತಕದ ಬೆನ್ನಲ್ಲೇ 100ನೇ ಸೆಂಚುರಿ ಕೂಡ ಮೂಡಿಬಂದಿದೆ. ಅಂದರೆ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 60ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಕೆಎಲ್ ರಾಹುಲ್ 65 ಎಸೆತಗಳಲ್ಲಿ ಅಜೇಯ 112 ರನ್ ಬಾರಿಸಿದ್ದರು. ಇದು ಐಪಿಎಲ್ನ 99ನೇ ಶತಕವಾಗಿದೆ.

ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 200 ರನ್ಗಳ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಪರ ಯುವ ಎಡಗೈ ದಾಂಡಿಗ ಸಾಯಿ ಸುದರ್ಶನ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ 61 ಎಸೆತಗಳನ್ನು ಎದುರಿಸಿದ ಸಾಯಿ 4 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 108 ರನ್ ಬಾರಿಸಿದರು. ಈ ಮೂಲಕ ಐಪಿಎಲ್ನ 100ನೇ ಶತಕ ಸಿಡಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು.