
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 19 ಗೆ ಸಿದ್ಧತೆಗಳು ಶುರುವಾಗಿದೆ. ಅದರ ಮೊದಲ ಹೆಜ್ಜೆಯಾಗಿ ಜುಲೈ 4 ರಿಂದ ಆಟಗಾರರ ಟ್ರೇಡ್ ವಿಂಡೋ ಓಪನ್ ಆಗಲಿದೆ. ಅದರಂತೆ ಶುಕ್ರವಾರದಿಂದ ಆಟಗಾರರ ಬದಲಿಸಿಕೊಳ್ಳಲು ಅವಕಾಶ ಇರಲಿದೆ.

ಅಂದರೆ ಟ್ರೇಡ್ ವಿಂಡೋ ಆಯ್ಕೆಯ ಮೂಲಕ 10 ಫ್ರಾಂಚೈಸಿಗಳು ಪರಸ್ಪರ ಆಟಗಾರರನ್ನು ಬದಲಿಸಿಕೊಳ್ಳಬಹುದು. ಅಥವಾ ಬೇರೊಂದು ತಂಡದಲ್ಲಿರುವ ಆಟಗಾರರನ್ನು ಹೆಚ್ಚಿನ ಮೊತ್ತ ನೀಡಿ ಖರೀದಿಸಬಹುದು. ಈ ಎರಡು ಆಯ್ಕೆಗಳ ಮೂಲಕ ಹರಾಜಿಗೂ ಮುನ್ನ ತಂಡಕ್ಕೆ ಹೊಸ ಆಟಗಾರರನ್ನು ಸೇರ್ಪಡೆಗೊಳಿಸಲು ಅವಕಾಶ ನೀಡಲಾಗಿದೆ.

ಉದಾಹರಣೆಗೆ... 2023 ರಲ್ಲಿ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯರನ್ನು, 2024 ರಲ್ಲಿ ಮುಂಬೈ ಇಂಡಿಯನ್ಸ್ ಖರೀದಿಸಿತ್ತು. ಆದರೆ ಇಲ್ಲಿ ಪಾಂಡ್ಯ ಹರಾಜಿನಲ್ಲಿ ಕಾಣಿಸಿಕೊಂಡಿರಲಿಲ್ಲ ಎಂಬುದು ವಿಶೇಷ. ಬದಲಾಗಿ ಟ್ರೇಡ್ ವಿಂಡೋ ಆಯ್ಕೆಯ ಮೂಲಕ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯಲ್ಲಿದ್ದ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ನೇರವಾಗಿ ಖರೀದಿಸಿದ್ದರು. ಇಲ್ಲಿ ನೇರವಾಗಿ ಖರೀದಿಸಲು ಅವಕಾಶ ಇರುವಂತೆ, ಆಟಗಾರರನ್ನು ನೀಡಿ ಮತ್ತೋರ್ವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು.

ಈ ಟ್ರೆಂಡ್ ವಿಂಡೋ ಆಯ್ಕೆಯು ಐಪಿಎಲ್ 2026 ರ ಮಿನಿ ಹರಾಜಿನ ಒಂದು ತಿಂಗಳ ಮುಂಚಿತವರೆಗೂ ಚಾಲ್ತಿಯಲ್ಲಿರಲಿದೆ. ಅದರಂತೆ ಶುಕ್ರವಾರದಿಂದ (ಜುಲೈ 4) ಎಲ್ಲಾ ಫ್ರಾಂಚೈಸಿಗಳು ಟ್ರೇಡ್ ವಿಂಡೋ ಲೆಕ್ಕಾಚಾರವನ್ನು ಶುರು ಮಾಡಲಿದ್ದಾರೆ.

ಇನ್ನು ಈ ಬಾರಿಯ ಟ್ರೇಡ್ ವಿಂಡೋ ಮೂಲಕ ಯಾವ ಆಟಗಾರ ಯಾವ ತಂಡದ ಪಾಲಾಗಲಿದ್ದಾರೆ? ಐಪಿಎಲ್ ಸೀಸನ್ 19 ಗೂ ಮುನ್ನ ಯಾರು ಯಾವ ತಂಡಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
Published On - 8:54 am, Tue, 1 July 25