IPL 2026: ಚೆನ್ನೈ ಸೂಪರ್ ಕಿಂಗ್ಸ್ಗೆ ಸಂಜು ಸ್ಯಾಮ್ಸನ್?
IPL 2026 Sanju Samson: ಸಂಜು ಸ್ಯಾಮ್ಸನ್ 2018 ರಿಂದ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಆರ್ಆರ್ ತಂಡದ ಭಾಗವಾದರೂ ಸ್ಯಾಮ್ಸನ್ ಪಾಲಿಗೆ ಐಪಿಎಲ್ ಟ್ರೋಫಿ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ. ಹೀಗಾಗಿ ಈ ಬಾರಿ ಅವರು ಹೊಸ ಫ್ರಾಂಚೈಸಿ ಪರ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.
Updated on: Jul 01, 2025 | 10:53 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗೂ ಮುನ್ನ ಸಂಜು ಸ್ಯಾಮ್ಸನ್ (Sanju Samson) ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಪಾಲಾಗಲಿದ್ದಾರಾ? ಈ ಪ್ರಶ್ನೆಗೆ ಸದ್ಯದ ಉತ್ತರ ಸಾಧ್ಯತೆ ಇಲ್ಲದೇನಿಲ್ಲ. ಏಕೆಂದರೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನನ್ನು ಟ್ರೇಡ್ ಮಾಡಿಕೊಳ್ಳಲು ಸಿಎಸ್ಕೆ ಫ್ರಾಂಚೈಸಿ ಆಸಕ್ತಿ ತೋರಿಸಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರುವ ಶಿವಂ ದುಬೆ ಅಥವಾ ರಚಿನ್ ರವೀಂದ್ರ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ನೀಡಿ, ಸಂಜು ಸ್ಯಾಮ್ಸನ್ ಅವರನ್ನು ಖರೀದಿಸಲು ಸಿಎಸ್ಕೆ ಫ್ರಾಂಚೈಸಿ ಮುಂದಾಗಿದ್ದು, ಉಭಯ ಫ್ರಾಂಚೈಸಿಗಳು ಈ ಬಗ್ಗೆ ಮಾತುಕತೆ ನಡೆಸುತ್ತಿದೆ ಎಂದು ಕೆಲ ವೆಬ್ಸೈಟ್ಗಳು ವರದಿ ಮಾಡಿದೆ.

ಇತ್ತ ಐಪಿಎಲ್ 2026ರ ಟ್ರೇಡ್ ವಿಂಡೋ ಜುಲೈ 4 ರಿಂದ ಓಪನ್ ಆಗಲಿದೆ. ಈ ಆಯ್ಲೆಯ ಮೂಲಕ ಪರಸ್ಪರ ಆಟಗಾರರನ್ನು ಬದಲಿಸಲು ಹಾಗೂ ಖರೀದಿಸಲು ಅವಕಾಶ ಇರಲಿದೆ. ಈ ಆಯ್ಕೆಯ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಸಂಜು ಸ್ಯಾಮ್ಸನ್ ಅವರನ್ನು ಕರೆತರುವ ಪಯತ್ನಕ್ಕೆ ಕೈ ಹಾಕಿರುವ ಸಾಧ್ಯತೆಯನ್ನು ಅಲ್ಲೆಗೆಳೆಯುವಂತಿಲ್ಲ.

ಏಕೆಂದರೆ ಮಹೇಂದ್ರ ಸಿಂಗ್ ಧೋನಿಯ ನಿವೃತ್ತಿಯ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟ್ರೇಡ್ ಮಾರ್ಕ್ ಯಾರು ಎಂಬ ಪ್ರಶ್ನೆಗೆ ಸಿಎಸ್ಕೆ ಫ್ರಾಂಚೈಸಿ ಬಳಿ ಉತ್ತರವಿಲ್ಲ. ಅತ್ತ ರಾಜಸ್ಥಾನ್ ರಾಯಲ್ಸ್ ತಂಡದ ಕೂಲ್ ಕ್ಯಾಪ್ಟನ್ ಎನಿಸಿಕೊಂಡಿರುವ ಸ್ಯಾಮ್ಸನ್ ಅವರನ್ನು ಕರೆತಂದರೆ ಹೊಸ ಸಂಚಲನ ಸೃಷ್ಟಿಸಬಹುದು. ಹೀಗಾಗಿಯೇ ಸಿಎಸ್ಕೆ ಹೊಡಿಬಡಿ ದಾಂಡಿಗನ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ.

ಇದಕ್ಕೂ ಮುನ್ನ 2021 ರಲ್ಲಿ ಆರ್ಆರ್ ತಂಡದಲ್ಲಿದ್ದ ರಾಬಿನ್ ಉತ್ತಪ್ಪ ಅವರನ್ನು ಸಿಎಸ್ಕೆ ಫ್ರಾಂಚೈಸಿ ಟ್ರೇಡ್ ಮಾಡುವ ಮೂಲಕ ತಂಡಕ್ಕೆ ಸೇರಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಆರ್ಆರ್ ತಂಡದಲ್ಲಿರುವ ಸೌತ್ ಕ್ರಿಕೆಟಿಗನ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕಣ್ಣಿಟ್ಟಿದೆ. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾದರೂ ಅಚ್ಚರಿಪಡಬೇಕಿಲ್ಲ.
