
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರ ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (CSK) ಬಿಗ್ ಡೀಲ್ ಕುದುರಿಸಿಕೊಳ್ಳುವ ಸಾಧ್ಯತೆಯಿದೆ. ಅದು ಕೂಡ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ (Sanju Samson) ಅವರನ್ನು ಖರೀದಿಸುವ ಮೂಲಕ..! ಇಂತಹದೊಂದು ಸುದ್ದಿಯೊಂದು ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದ್ದವು.

ಈ ಸುದ್ದಿ ಬೆನ್ನಲ್ಲೇ ಐಪಿಎಲ್ 2026ರ ಟ್ರೇಡ್ ವಿಂಡೋ ಮೂಲಕ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಲು ನಾವು ಆಸಕ್ತರಾಗಿದ್ದೇವೆ ಎಂಬುದನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದರು. ಸ್ಯಾಮ್ಸನ್ ಅವರ ಆಯ್ಕೆಯನ್ನು ನಾವು ಖಂಡಿತವಾಗಿಯೂ ಎದುರು ನೋಡುತ್ತಿದ್ದೇವೆ. ಏಕೆಂದರೆ ಅವರು ಪರಿಪೂರ್ಣ ಆಟಗಾರ. ಹೀಗಾಗಿ ಅವರನ್ನು ತಂಂಡಕ್ಕೆ ಕರೆತರಲು ಉತ್ಸುಕರಾಗಿದ್ದೇವೆ ಎಂದು ತಿಳಿಸಿದ್ದರು.

ಸಂಜು ಸ್ಯಾಮ್ಸನ್ ಭಾರತೀಯ ಬ್ಯಾಟ್ಸ್‌ಮನ್. ಅಷ್ಟೇ ಅಲ್ಲದೆ ವಿಕೆಟ್ ಕೀಪರ್ ಮತ್ತು ಓಪನರ್. ಅವರು ಆಯ್ಕೆಗೆ ಲಭ್ಯವಿದ್ದರೆ, ನಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಆಯ್ಕೆಯನ್ನು ನಾವು ಖಂಡಿತವಾಗಿಯೂ ಪರಿಗಣಿಸುತ್ತೇವೆ. ಆದರೆ ಯಾರನ್ನು ನೀಡಿ ಸಂಜು ಸ್ಯಾಮ್ಸನ್ ಅವರನ್ನು ಖರೀದಿಸುತ್ತೇವೆ ಎಂಬ ಬಗ್ಗೆ ನಾವು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇದಾಗ್ಯೂ ನಾವು ಸ್ಯಾಮ್ಸನ್ ಮೇಲೆ ಕಣ್ಣಿಟ್ಟಿರುವುದು ನಿಜ ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದರು.

ಹೀಗಾಗಿ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಲಿದ್ದಾರೆ ಎಂಬ ಸುದ್ದಿ ಮಹತ್ವ ಪಡೆದುಕೊಂಡಿತ್ತು. ಆದರೀಗ ಈ ಸುದ್ದಿಗಳಿಗೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಬ್ರೇಕ್ ಹಾಕಿದೆ. ಸ್ಯಾಮ್ಸನ್ ಮುಂದಿನ ಸೀಸನ್ನಲ್ಲೂ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ.

ಇತ್ತ ಆರ್ಆರ್ ತಂಡದ ಈ ಖಚಿತಪಡಿಸುವಿಕೆ ಟ್ರೇಡ್ ಡೀಲ್ ವಿಫಲವಾಗಿರುವುದರ ಭಾಗವಾ? ಅಥವಾ ಸ್ಯಾಮ್ಸನ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳುವ ನಿರ್ಧಾರವಾ? ಎಂಬುದು ಬಹಿರಂಗವಾಗಿಲ್ಲ. ಇದಾಗ್ಯೂ ಸಂಜು ಸ್ಯಾಮ್ಸನ್ ಅವರು ರಾಜಸ್ಥಾನ್ ರಾಯಲ್ಸ್ ತಂಡದಲ್ಲೇ ಉಳಿಯಲಿದ್ದಾರೆ ಎಂಬುದನ್ನು ಮಾತ್ರ ಖಚಿತಪಡಿಸಿದ್ದಾರೆ. ಹೀಗಾಗಿ ಐಪಿಎಲ್ 2026 ರಲ್ಲೂ ಆರ್ಆರ್ ಪಡೆಯನ್ನು ಸಂಜು ಸ್ಯಾಮ್ಸನ್ ಮುನ್ನಡೆಸುವುದನ್ನು ಎದುರು ನೋಡಬಹುದು.