
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಚಾಂಪಿಯನ್ ಆಟಗಾರ ರವೀಂದ್ರ ಜಡೇಜಾ ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಆವೃತ್ತಿಯಲ್ಲಿ ಹೊಸ ತಂಡದ ಪರ ಆಡುವುದನ್ನು ಕಾಣಬಹುದು. ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ರವೀಂದ್ರ ಜಡೇಜಾರನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಟ್ರೇಡಿಂಗ್ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ ಎನ್ನಲಾಗುತ್ತಿದೆ.

ವಾಸ್ತವವಾಗಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸಂಜು ಸ್ಯಾಮ್ಸನ್ ಮತ್ತು ರವೀಂದ್ರ ಜಡೇಜಾ ಅವರನ್ನು ಟ್ರೇಡಿಂಗ್ ಮೂಲಕ ತಮ್ಮ ತಂಡಗಳಿಗೆ ಸೇರಿಸಿಕೊಳ್ಳುತ್ತಿವೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಈ ಸುದ್ದಿ ಇದುವರೆಗೂ ಗಾಳಿ ಸುದ್ದಿಯಾಗಿದ್ದರೂ, ಉಭಯ ಫ್ರಾಂಚೈಸಿಗಳು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿದ್ದು, ಇಬ್ಬರು ಆಟಗಾರರು ಮುಂದಿನ ವರ್ಷದಿಂದ ಬೇರೆ ಬೇರೆ ತಂಡದಲ್ಲಿ ಆಡುವುದನ್ನು ಕಾಣಬಹುದು.

ಒಂದು ವೇಳೆ ರವೀಂದ್ರ ಜಡೇಜಾ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರಿಕೊಂಡರೆ, ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ಅವರ 12 ವರ್ಷಗಳ ಪ್ರಯಾಣ ಅಂತ್ಯವಾಗಲಿದೆ. ಸಿಎಸ್‌ಕೆ ತಂಡದ ಆಲ್‌ರೌಂಡರ್ ವಿಭಾಗದ ಜೀವಾಳ ಎನಿಸಿಕೊಂಡಿರುವ ಜಡೇಜಾ, ಈ 12 ವರ್ಷಗಳಲ್ಲಿ ತಂಡವು ಮೂರು ಪ್ರಶಸ್ತಿಗಳನ್ನು (2018, 2021, ಮತ್ತು 2023) ಗೆಲ್ಲಲು ಸಹಾಯ ಮಾಡಿದ್ದು ಮಾತ್ರವಲ್ಲದೆ, ಫ್ರಾಂಚೈಸಿಯ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

2012 ರಲ್ಲಿ ಜಡೇಜಾ ಫ್ರಾಂಚೈಸಿ ಸೇರಿದಾಗ, ಅವರನ್ನು 9.2 ಕೋಟಿಗೆ ಖರೀದಿಸಲಾಯಿತು. ನಂತರ ಅವರ ಸಂಬಳವನ್ನು 2014 ರಲ್ಲಿ 5.5 ಕೋಟಿಗೆ ಇಳಿಸಲಾಯಿತು. 2018 ರಲ್ಲಿ 7 ಕೋಟಿ ರೂ.ಗೆ ಮತ್ತೆ ತಂಡಕ್ಕೆ ಮರಳಿದ ಜಡೇಜಾರನ್ನು 2022 ರಲ್ಲಿ 16 ಕೋಟಿ ರೂ. ನೀಡಿ ತಂಡದಲ್ಲಿ ಉಳಿಸಿಕೊಳ್ಳಲಾಯಿತು. ಹಾಗೆಯೇ 2025 ರಲ್ಲಿಯೂ ಜಡೇಜಾ ಅವರಿಗೆ 18 ಕೋಟಿ ರೂ. ನೀಡಿ ತಂಡದಲ್ಲೇ ಉಳಿಸಿಕೊಳ್ಳಲಾಗಿತ್ತು.

ಒಟ್ಟಾರೆಯಾಗಿ, ಜಡೇಜಾ ಫ್ರಾಂಚೈಸಿಯೊಂದಿಗೆ 12 ಆವೃತ್ತಿಗಳನ್ನು ಕಳೆದಿದ್ದು, ಈ 12 ವರ್ಷಗಳ ಪ್ರಯಾಣದಲ್ಲಿ ಜಡೇಜಾ ಅವರ ಖಜಾನೆಗೆ ಕೋಟಿ ಕೋಟಿ ರೂ. ಬಂದು ಬಿದ್ದಿದೆ. ಒಟ್ಟಾರೆಯಾಗಿ ಸಿಎಸ್‌ಕೆ ಜೊತೆಗಿನ ಪ್ರಯಾಣದಲ್ಲಿ ಜಡೇಜಾ ಒಟ್ಟು 123.4 ಕೋಟಿ ರೂಗಳನ್ನು ಸಂಪಾಧನೆ ಮಾಡಿದ್ದಾರೆ.