
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಹರಾಜು ಮುಂದಿನ ತಿಂಗಳಲ್ಲಿ ನಡೆಯಲಿದೆ. ಈಗಾಗಲೇ ಹಳೆಯ 8 ಫ್ರಾಂಚೈಸಿಗಳು ಒಟ್ಟು 27 ಆಟಗಾರರನ್ನು ಉಳಿಸಿಕೊಂಡಿದೆ. ಇನ್ನು ಈ ಬಾರಿ ಹೊಸ ಎರಡು ತಂಡಗಳ ಸೇರ್ಪಡೆಯಿಂದಾಗಿ 50 ಆಟಗಾರರಿಗೆ ಅವಕಾಶ ಸಿಗಲಿದೆ. ಹೀಗಾಗಿಯೇ ಮೆಗಾ ಹರಾಜಿನಲ್ಲೂ ಆಟಗಾರರ ಖರೀದಿಗಾಗಿ ಭರ್ಜರಿ ಪೈಪೋಟಿ ಕಂಡು ಬರುವ ನಿರೀಕ್ಷೆಯಿದೆ. ಇದಕ್ಕಾಗಿ ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಸಿದ್ದತೆಗಳನ್ನು ಶುರು ಮಾಡಿದೆ.

ಅದರಂತೆ ಬಹುತೇಕ ಫ್ರಾಂಚೈಸಿಗಳ ಸ್ಕೌಟ್ಸ್ ಅಧಿಕಾರಿಗಳು (ಆಟಗಾರರ ಆಯ್ಕೆ ತಂಡ) ಇದೀಗ ಮೂರು ಟೂರ್ನಿಗಳ ಮೇಲೆ ಕಣ್ಣಿಟ್ಟಿದೆ. ಐಪಿಎಲ್ ಮೆಗಾ ಹರಾಜಿನ ಸಿದ್ದತೆಯಲ್ಲಿರುವ ಫ್ರಾಂಚೈಸಿಗಳ ತಂಡ ಬಿಗ್ ಬ್ಯಾಷ್ ಲೀಗ್, ಶ್ರೀಲಂಕಾ ಪ್ರೀಮಿಯರ್ ಲೀಗ್ ಹಾಗೂ ವಿಜಯ್ ಹಜಾರೆ ಟೂರ್ನಿಗಳ ಪ್ರದರ್ಶನವನ್ನು ಗಮನಿಸುತ್ತಿರುವುದಾಗಿ ಫ್ರಾಂಚೈಸಿ ಸ್ಕೌಟ್ಸ್ ಒಬ್ಬರು ತಿಳಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ನಲ್ಲಿ ಬಹುತೇಕ ಸ್ಟಾರ್ ಆಟಗಾರರು ಕಾಣಿಸಿಕೊಳ್ಳುತ್ತಿದ್ದು, ಹೀಗಾಗಿ ವಿದೇಶಿ ಆಟಗಾರರ ಆಯ್ಕೆಗಾಗಿ ಬಿಬಿಎಲ್ನಲ್ಲಿ ಯಾರು ಎಲ್ಲಾ ರೀತಿಯಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಎದುರು ನೋಡುತ್ತಿದ್ದಾರೆ.

ಇನ್ನೊಂದೆಡೆ ದೇಶೀಯ ಪ್ರತಿಭೆಗಳನ್ನು ಗುರುತಿಸಲು ವಿಜಯ್ ಹಜಾರೆ ಟೂರ್ನಿಯಲ್ಲಿನ ಪ್ರದರ್ಶನವನ್ನು ಗಮನಿಸುತ್ತಿದ್ದಾರೆ. ಏಕೆಂದರೆ 8 ವಿದೇಶಿ ಆಟಗಾರರ ಆಯ್ಕೆ ಬಳಿಕ ಎಲ್ಲಾ ತಂಡಗಳು ಭಾರತೀಯ ಆಟಗಾರರನ್ನೇ ಆಯ್ಕೆ ಮಾಡಬೇಕು. ಹೀಗಾಗಿ ಈ ಬಾರಿ ಟೂರ್ನಿಯಲ್ಲಿ ಯಾವ ಆಟಗಾರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರ ಆಯ್ಕೆಗಾಗಿ ಬೇಕಾದ ಮಾಸ್ಟರ್ ಪ್ಲ್ಯಾನ್ಗಳನ್ನು ರೂಪಿಸಲಾಗುತ್ತಿದೆ.

ಅದೇ ರೀತಿ ಶ್ರೀಲಂಕಾದಲ್ಲಿ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್ನಲ್ಲೂ ಏಷ್ಯಾದ ಬಹುತೇಕ ಆಟಗಾರರು ಕಾಣಿಸಿಕೊಂಡಿದ್ದಾರೆ. ಈ ಬಾರಿ ಭಾರತದಲ್ಲೇ ಐಪಿಎಲ್ ನಡೆಯುತ್ತಿರುವುದರಿಂದ ಏಷ್ಯಾ ಆಟಗಾರರ ಖರೀದಿಗೂ ಫ್ರಾಂಚೈಸಿಗಳು ಒಲವು ತೋರಲಿದೆ. ಹೀಗಾಗಿ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಯಾರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂಬುದನ್ನು ಕೂಡ ಐಪಿಎಲ್ ಫ್ರಾಂಚೈಸಿಗಳು ಎದುರು ನೋಡುತ್ತಿದ್ದಾರೆ.

ಈ ಮೂರು ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರ ಖರೀದಿಗೆ ಈ ಬಾರಿ 10 ಫ್ರಾಂಚೈಸಿಗಳು ಪ್ಲ್ಯಾನ್ ರೂಪಿಸಲಿದ್ದು, ಅದರಂತೆ ಈ ಮೂರು ಟೂರ್ನಿಗಳಲ್ಲಿ ಟಾಪ್ ಫರ್ಫಾಮರ್ಗಾಗಿ ಭರ್ಜರಿ ಪೈಪೋಟಿ ಕಂಡು ಬರುವುದಂತು ಸತ್ಯ.