
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ (Ishan Kishan) ಮುಂಬರುವ ರಣಜಿ ಟೂರ್ನಿಯಲ್ಲಿ ಜಾರ್ಖಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಅಕ್ಟೋಬರ್ 15 ರಿಂದ ರಣಜಿ ಪಂದ್ಯಾವಳಿ ಶುರುವಾಗಲಿದ್ದು, ಈ ಟೂರ್ನಿಯಲ್ಲಿ ಜಾರ್ಖಂಡ್ ತಂಡದ ವಿಕೆಟ್ ಕೀಪಿಂಗ್ ಜೊತೆ ನಾಯಕತ್ವದ ಜವಾಬ್ದಾರಿಯನ್ನು ಇಶಾನ್ ಕಿಶನ್ ನಿರ್ವಹಿಸಲಿದ್ದಾರೆ.

ಇದಕ್ಕೂ ಮುನ್ನ ಇಶಾನ್ ಕಿಶನ್ ಇರಾನಿ ಕಪ್ ಟೂರ್ನಿಗಾಗಿ ಶೇಷ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಅಕ್ಟೋಬರ್ 1 ರಿಂದ ಶುರುವಾಗಲಿರುವ ಹಾಲಿ ರಣಜಿ ಚಾಂಪಿಯನ್ ವಿದರ್ಭ ಹಾಗೂ ಶೇಷ ಭಾರತ ತಂಡದ ನಡುವಣ ಈ ಪಂದ್ಯದಲ್ಲಿ ಇಶಾನ್ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಇದೀಗ ಮುಂಬರುವ ರಣಜಿ ಟೂರ್ನಿಗೆ ಜಾರ್ಖಂಡ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ಇಶಾನ್ ಮತ್ತೆ ಟೆಸ್ಟ್ ಕ್ರಿಕೆಟ್ಗೆ ಮರಳಲು ಸಕಲ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಇದಕ್ಕೂ ಮುನ್ನ ಇಶಾನ್ ಕಿಶನ್ ಟೀಮ್ ಇಂಡಿಯಾ ಪರ 2 ಟೆಸ್ಟ್ ಪಂದ್ಯಗಳನ್ನಾಡಿದ್ದರು.

ಟೀಮ್ ಇಂಡಿಯಾ ಪರ ಟೆಸ್ಟ್ನಲ್ಲಿ 3 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದ ಇಶಾನ್ ಒಂದು ಅರ್ಧಶತಕದೊಂದಿಗೆ ಒಟ್ಟು 78 ರನ್ ಕಲೆಹಾಕಿದ್ದರು. ಆದರೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಈ ಸರಣಿಯ ಬಳಿಕ ಇಶಾನ್ ಕಿಶನ್ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಇದಾಗ್ಯೂ ಅವರು 2025 ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯಕ್ಕೆ ರಿಷಭ್ ಪಂತ್ ಬದಲಿಯಾಗಿ ಆಯ್ಕೆಯಾಗಿದ್ದರು.

ಆದರೆ ಗಾಯದ ಕಾರಣ ಇಶಾನ್ ಕಿಶನ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಸಂಪೂರ್ಣ ಫಿಟ್ನೆಸ್ ಸಾಧಿಸಿರುವ ಇಶಾನ್ ಶೇಷ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೆ ಮುಂಬರುವ ರಣಜಿ ಟೂರ್ನಿಯಲ್ಲಿ ಜಾರ್ಖಂಡ್ ತಂಡದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಜಾರ್ಖಂಡ್ ತಂಡ: ಇಶಾನ್ ಕಿಶನ್ (ನಾಯಕ), ವಿರಾಟ್ ಸಿಂಗ್, ಶರಣದೀಪ್ ಸಿಂಗ್, ಶಿಖರ್ ಮೋಹನ್, ಕುಮಾರ್ ಕುಶಾಗ್ರಾ, ಕುಮಾರ್ ಸೂರಜ್, ಅನುಕುಲ್ ರಾಯ್, ಮನೀಷಿ, ವಿಕಾಸ್ ಕುಮಾರ್, ಜತಿನ್ ಕುಮಾರ್ ಪಾಂಡೆ, ವಿಕಾಸ್ ಸಿಂಗ್, ಆದಿತ್ಯ ಸಿಂಗ್, ಸಾಹಿಲ್ ರಾಜ್, ಶುಭಂ ಸಿಂಗ್, ಆರ್ಯಮನ್ ಸಿಂಗ್ ಮತ್ತು ರಿಶವ್ ರಾಜ್.