- Kannada News Photo gallery Cricket photos Ishan Kishan batted with Rishabh Pant’s bat during his whirlwind knock IND vs WI 2nd Test
Ishan Kishan: ರಿಷಭ್ ಪಂತ್ ಬ್ಯಾಟ್ ಹಿಡಿದು ಸ್ಫೋಟಕ ಬ್ಯಾಟಿಂಗ್ ನಡೆಸಿದ ಇಶಾನ್ ಕಿಶನ್: ಪಂದ್ಯದ ಬಳಿಕ ಏನಂದ್ರು ನೋಡಿ
IND vs WI 2nd Test: ಟಿ20 ಮಾದರಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕಿಶನ್ ಕೇವಲ 34 ಎಸೆತಗಳಲ್ಲಿ 4 ಫೋರ್, 2 ಸಿಕ್ಸರ್ನಿಂದ ಅಜೇಯ 52 ರನ್ ಚಚ್ಚಿದರು. ಟೆಸ್ಟ್ ಕ್ರಿಕೆಟ್ನಲ್ಲಿ ಇದು ಕಿಶನ್ ಅವರ ಚೊಚ್ಚಲ ಅರ್ಧಶತಕವಾಗಿದೆ.
Updated on: Jul 24, 2023 | 8:38 AM

ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ನಡೆಯುತ್ತಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಅಂತಿಮ ಎರಡನೇ ಟೆಸ್ಟ್ ಪಂದ್ಯ ರೋಚಕತೆ ಸೃಷ್ಟಿಸಿದೆ. ಇಂದು ಕೊನೆಯ ದಿನದಾಟ ಮಾತ್ರ ಬಾಕಿ ಉಳಿದಿದ್ದು ಕೆರಿಬಿಯನ್ನರ ಗೆಲುವಿಗೆ 289 ರನ್ಗಳ ಅವಶ್ಯಕತೆಯಿದ್ದರೆ, ಭಾರತದ ಜಯಕ್ಕೆ 8 ವಿಕೆಟ್ಗಳು ಬೇಕಾಗಿದೆ.

ಮೊದಲ ಇನ್ನಿಂಗ್ಸ್ನಲ್ಲಿ ವಿಂಡೀಸ್ ತಂಡವನ್ನು 255 ರನ್ಗಳಿಗೆ ಆಲೌಟ್ ಮಾಡಿ ತನ್ನ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿದ ಭಾರತ ಭರ್ಜರಿ ಬ್ಯಾಟಿಂಗ್ ನಡೆಸಿತು. 12 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತ 100 ರ ಅಂಚಿಗೆ ಬಂದು ನಿಂತಿತು.

ನಾಯಕ ರೋಹಿತ್ ಶರ್ಮಾ 44 ಎಸೆತಗಳಲ್ಲಿ 57 ರನ್ ಸಿಡಿಸಿದರೆ, ಯಶಸ್ವಿ ಜೈಸ್ವಾಲ್ 38 ರನ್ ಗಳಿಸಿದರು. ಬಳಿಕ ಶುರುವಾಗಿದ್ದು ಇಶಾನ್ ಕಿಶನ್ ಆಟ.

ಟಿ20 ಮಾದರಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕಿಶನ್ ಕೇವಲ 34 ಎಸೆತಗಳಲ್ಲಿ 4 ಫೋರ್, 2 ಸಿಕ್ಸರ್ನಿಂದ ಅಜೇಯ 52 ರನ್ ಚಚ್ಚಿದರು. ಟೆಸ್ಟ್ ಕ್ರಿಕೆಟ್ನಲ್ಲಿ ಇದು ಕಿಶನ್ ಅವರ ಚೊಚ್ಚಲ ಅರ್ಧಶತಕವಾಗಿದೆ.

ವಿಶೇಷ ಎಂದರೆ ಕಿಶನ್ ಅವರು ಥೇಟ್ ರಿಷಭ್ ಪಂತ್ ಮಾದರಿಯಲ್ಲಿ ಒಂದೇ ಕೈಯಲ್ಲಿ ಸಿಕ್ಸ್ ಸಿಡಿಸಿ ಅರ್ಧಶತಕ ಗಳಿಸಿದರು. ಮತ್ತೊಂದು ಅಚ್ಚರಿ ಎಂದರೆ ಕಿಶನ್ ಅವರು ಆಟವಾಡಿದ್ದು ಪಂತ್ ಅವರ ಬ್ಯಾಟ್ನಲ್ಲಿ.

ಇಶಾನ್ ಕಿಶನ್ ಆಡುತ್ತಿದ್ದ ಬ್ಯಾಟ್ನಲ್ಲಿ RP 17 ಎಂದು ಬರೆದಿರುವುದು ಕಂಡು ಬಂದಿದೆ. ಇದು ರಿಷಭ್ ಪಂತ್ ಅವರ ಬ್ಯಾಟ್ ಆಗಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಕಿಶನ್, ನಾನು ಇಲ್ಲಿಗೆ ಬರುವ ಮುನ್ನ ಎನ್ಸಿಎಗೆ ತೆರಳಿದ್ದೆ. ಅಲ್ಲಿ ಪಂತ್ರನ್ನು ಭೇಟಿ ಮಾಡಿದೆ. ಅವರು ಕೆಲ ಬ್ಯಾಟಿಂಗ್ ಟಿಪ್ಸ್ ನೀಡಿದರು ಎಂದಿದ್ದಾರೆ.

ನಾನು ಮತ್ತು ರಿಷಭ್ ಪಂತ್ ಅಂಡರ್-19 ದಿನಗಳಿಂದ ಜೊತೆಗಿದ್ದೇವೆ. ನಮ್ಮ ನಡುವೆ ಉತ್ತಮ ಬಾಂಧವ್ಯವಿದೆ. ನಾನು ಹೇಗೆ ಆಡುತ್ತೇನೆ ಎಂಬುದು ಪಂತ್ಗೆ ಚೆನ್ನಾಗಿ ತಿಳಿದಿದೆ. ನನ್ನ ಬ್ಯಾಟಿಂಗ್ ಕ್ರಮಾಂಕದ ಬಗ್ಗೆಯೂ ಪಂತ್ ಕೆಲ ಟಿಪ್ಸ್ ನೀಡಿದರು ಎಂದು ಇಶಾನ್ ಕಿಶನ್ ಹೇಳಿದ್ದಾರೆ.




