
ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ಮುಂದುವರೆಸಿರುವ 41 ವರ್ಷ ಜೇಮ್ಸ್ ಅ್ಯಂಡರ್ಸನ್ (James Anderson) ಇದೀಗ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅದು ಕೂಡ ಪ್ರತಿ ವರ್ಷ ವಿಕೆಟ್ ಕಬಳಿಸುವ ಮೂಲಕ ಎಂಬುದು ವಿಶೇಷ.

ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿರುವ ಅ್ಯಂಡರ್ಸನ್ 25 ಓವರ್ಗಳನ್ನು ಎಸೆದು ಕೇವಲ 47 ರನ್ ನೀಡಿ 3 ವಿಕೆಟ್ ಕಬಳಿಸಿದರು. ಈ ಮೂರು ವಿಕೆಟ್ಗಳೊಂದಿಗೆ ಪ್ರತಿ ವರ್ಷ ವಿಕೆಟ್ ಪಡೆದ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದರು.

ಅಂದರೆ 2003 ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಜೇಮ್ಸ್ ಅ್ಯಂಡರ್ಸನ್ ಪ್ರತಿ ವರ್ಷ ಕೂಡ ವಿಕೆಟ್ ಕಬಳಿಸುತ್ತಾ ಬಂದಿದ್ದಾರೆ. 2003 ರಿಂದ ಶುರುವಾದ ಅವರ ವಿಕೆಟ್ ಬೇಟೆ 2004, 2005, 2006, 2007, 2008, 2009, 2010, 2011, 2012, 2013, 2014, 2015, 2016, 2017, 2018, 2019, 2020, 2021, 2022, 2023..ಹೀಗೆ ಮುಂದುವರೆದು ಇದೀಗ 2024 ರಲ್ಲೂ ವಿಕೆಟ್ ಕಬಳಿಸಿದ್ದಾರೆ.

ಈ ಮೂಲಕ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಬಳಿಕ ಪ್ರತಿ ವರ್ಷ ವಿಕೆಟ್ ಕಬಳಿಸಿದ ವಿಶೇಷ ದಾಖಲೆಯೊಂದನ್ನು ಜೇಮ್ಸ್ ಅ್ಯಂಡರ್ಸನ್ ತಮ್ಮದಾಗಿಸಿಕೊಂಡಿದ್ದಾರೆ.

ಸದ್ಯ ಟೆಸ್ಟ್ ಕ್ರಿಕೆಟ್ನಲ್ಲಿ 342 ಇನಿಂಗ್ಸ್ ಆಡಿರುವ 41 ವರ್ಷದ ಜೇಮ್ಸ್ ಅ್ಯಂಡರ್ಸನ್ ಇಳಿ ವಯಸ್ಸಿನಲ್ಲೂ ಮಿಂಚಿನ ದಾಳಿ ಸಂಘಟಿಸುತ್ತಿದ್ದಾರೆ. ಇದೀಗ ಒಟ್ಟು 693 ವಿಕೆಟ್ ಕಬಳಿಸಿರುವ ಜಿಮ್ಮಿ 700 ವಿಕೆಟ್ಗಳ ಸಾಧನೆ ಮಾಡಲು ಇನ್ನು ಕೇವಲ 7 ವಿಕೆಟ್ಗಳ ಅವಶ್ಯಕತೆಯಿದೆ.

ಈ ಮೂಲಕ ಟೆಸ್ಟ್ನಲ್ಲಿ 700 ವಿಕೆಟ್ಗಳನ್ನು ಕಬಳಿಸಿದ ಮೊದಲ ವೇಗಿ ವಿಶ್ವ ದಾಖಲೆ ಬರೆಯುವ ಉತ್ತಮ ಅವಕಾಶ ಜೇಮ್ಸ್ ಅ್ಯಂಡರ್ಸನ್ ಮುಂದಿದೆ. ಈ ದಾಖಲೆಯನ್ನು ಟೀಮ್ ಇಂಡಿಯಾ ವಿರುದ್ಧದ ಸರಣಿಯಲ್ಲೇ ಬರೆಯಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.