
ಇಂಗ್ಲೆಂಡ್ ಪ್ರವಾಸದ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳ ಗೊಂಚಲು ಪಡೆದಿದ್ದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ, ಇದೀಗ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲೂ 5 ವಿಕೆಟ್ ಪಡೆಯುವ ಮೂಲಕ ಆಂಗ್ಲ ತಂಡವನ್ನು ಬೃಹತ್ ಸ್ಕೋರ್ ಮಾಡದಂತೆ ತಡೆದಿದ್ದಾರೆ. ಇದರ ಜೊತೆಗೆ ದಾಖಲೆ ಕೂಡ ಸೃಷ್ಟಿಸಿದ್ದಾರೆ.

ವಾಸ್ತವವಾಗಿ ಲೀಡ್ಸ್ ಟೆಸ್ಟ್ ನಂತರ, ಬುಮ್ರಾ ಈಗ ಲಾರ್ಡ್ಸ್ ಟೆಸ್ಟ್‌ನಲ್ಲೂ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಬುಮ್ರಾ (13 ಬಾರಿ) ವಿದೇಶಿ ನೆಲದಲ್ಲಿ ಅತಿ ಹೆಚ್ಚು ಐದು ವಿಕೆಟ್‌ಗಳನ್ನು ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇದು ಮಾತ್ರವಲ್ಲದೆ, ಬುಮ್ರಾ ತಮ್ಮ ವೃತ್ತಿಜೀವನದಲ್ಲಿ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಬಾರಿ ಐದು ವಿಕೆಟ್‌ಗಳನ್ನು ಕಬಳಿಸಿದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ಮೊದಲ ದಿನದಂದು ಕೇವಲ ಒಂದು ವಿಕೆಟ್ ಪಡೆದಿದ್ದರು. ಆದರೆ ಎರಡನೇ ದಿನದಾಟ ಆರಂಭದಲ್ಲೇ ಮೊದಲು ಬೆನ್ ಸ್ಟೋಕ್ಸ್ ಅವರನ್ನು ಬೌಲ್ಡ್ ಮಾಡಿದರು. ಮುಂದಿನ ಎಸೆತದಲ್ಲಿ ಅವರು ಕ್ರಿಸ್ ವೋಕ್ಸ್ ಅವರ ವಿಕೆಟ್ ಪಡೆದರು ಮತ್ತು ಸ್ವಲ್ಪ ಸಮಯದಲ್ಲೇ ಶತಕ ದಾಖಲಿಸಿದ ಜೋ ರೂಟ್ ಅವರ ವಿಕೆಟ್ ಪಡೆದರು.

ಬುಮ್ರಾ ಅವರ ಮಾರಕ ದಾಳಿ ಹೇಗಿತ್ತೆಂದರೆ ಅವರು ಕೇವಲ 7 ಎಸೆತಗಳಲ್ಲಿ ಈ ಮೂರು ವಿಕೆಟ್‌ಗಳನ್ನು ಪಡೆದರು. ಅಲ್ಲದೆ ಬುಮ್ರಾ, ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಐದು ವಿಕೆಟ್‌ಗಳನ್ನು ಸಹ ಪೂರ್ಣಗೊಳಿಸಿದರು. ಇದರೊಂದಿಗೆ ಹಲವು ದಾಖಲೆಗಳನ್ನು ಸೃಷ್ಟಿಸಿದರು.

ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧ ತಮ್ಮ ಐದನೇ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಇದು ಯಾವುದೇ ತಂಡದ ವಿರುದ್ಧ ಅವರ ಅತ್ಯುತ್ತಮ ಸಾಧನೆಯಾಗಿದೆ. ಅವರು ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಅಷ್ಟೇ ಅಲ್ಲ, ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ದಾಖಲೆ ಅವರಿಗಿದೆ.

ಇಂಗ್ಲೆಂಡ್ ವಿರುದ್ಧ ಐದು ವಿಕೆಟ್ ಕಬಳಿಸುವ ಮೂಲಕ ಜಸ್ಪ್ರೀತ್ ಬುಮ್ರಾ ಅವರ ಕನಸು ಕೂಡ ನನಸಾಯಿತು. ಬುಮ್ರಾ ಲಾರ್ಡ್ಸ್‌ನಲ್ಲಿ ಮೊದಲ ಬಾರಿಗೆ ಐದು ವಿಕೆಟ್ ಕಬಳಿಸುವ ಸಾಧನೆ ಮಾಡಿದ್ದಾರೆ. ಈಗ ಬುಮ್ರಾ ಅವರ ಹೆಸರನ್ನು ಲಾರ್ಡ್ಸ್ ಹಾನರ್ ಬೋರ್ಡ್‌ನಲ್ಲಿ ಮುದ್ರಿಸಲಾಗುವುದು.

ವಿದೇಶಿ ನೆಲದಲ್ಲಿ ಅತಿ ಹೆಚ್ಚು ಅಂದರೆ 13 ಬಾರಿ ಐದು ವಿಕೆಟ್ ಗೊಂಚಲು ಪಡೆದ ಬೌಲರ್ ಜಸ್ಪ್ರೀತ್ ಬುಮ್ರಾ. ಈ ಮೂಲಕ ಅವರು ಕಪಿಲ್ ದೇವ್ ಅವರ ದಾಖಲೆಯನ್ನು ಸಹ ಮುರಿದಿದ್ದಾರೆ. ಇದು ಮಾತ್ರವಲ್ಲದೆ, ಅವರು ಏಷ್ಯನ್ ಬೌಲರ್‌ಗಳಲ್ಲಿ ವಾಸಿಮ್ ಅಕ್ರಮ್ ಅವರ ದಾಖಲೆಯನ್ನು ಸರಿಗಟ್ಟಿದರು. ವಾಸಿಮ್ ಅಕ್ರಮ್ ಸೆನಾ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) ದೇಶಗಳಲ್ಲಿ 11 ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದರು. ಈಗ ಬುಮ್ರಾ ಕೂಡ ಈ ಸಂಖ್ಯೆಯನ್ನು ತಲುಪಿದ್ದಾರೆ.