
ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾ ಜಸ್ಪ್ರೀತ್ ಬುಮ್ರಾ ವಿಶೇಷ ದಾಖಲೆ ಬರೆದಿದ್ದಾರೆ. ಈ ಪಂದ್ಯದ ಮೊದಲ ದಿನದಾಟದಲ್ಲಿ 11 ಓವರ್ ಎಸೆದ ಬುಮ್ರಾ ಉಸ್ಮಾನ್ ಖ್ವಾಜಾ (13) ಅವರ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.

ಈ ವಿಕೆಟ್ನೊಂದಿಗೆ 2024 ರಲ್ಲಿ ಟೆಸ್ಟ್ನಲ್ಲಿ 50 ವಿಕೆಟ್ ಪೂರೈಸಿದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡರು. ಅಲ್ಲದೆ ಒಂದು ವರ್ಷದೊಳಗೆ ಟೆಸ್ಟ್ನಲ್ಲಿ 50 ವಿಕೆಟ್ ಕಬಳಿಸಿದ ಭಾರತದ 3ನೇ ವೇಗದ ಬೌಲರ್ ಎಂಬ ಹಿರಿಮೆಗೂ ಪಾತ್ರರಾದರು.

ಇದಕ್ಕೂ ಮುನ್ನ ಭಾರತದ ಪರ ಈ ಸಾಧನೆ ಮಾಡಿದ್ದು ಕಪಿಲ್ ದೇವ್ ಮತ್ತು ಝಹೀರ್ ಖಾನ್ ಮಾತ್ರ. 1979 ಮತ್ತು 1983 ರಲ್ಲಿ ಕಪಿಲ್ ದೇವ್ ಕ್ರಮವಾಗಿ 74 ಹಾಗೂ 75 ವಿಕೆಟ್ ಕಬಳಿಸಿದ್ದರು. ಹಾಗೆಯೇ ಝಹೀರ್ ಖಾನ್ 2002 ರಲ್ಲಿ 51 ವಿಕೆಟ್ ಕಬಳಿಸಿ ಮಿಂಚಿದ್ದರು.

ಇದೀಗ ಜಸ್ಪ್ರೀತ್ ಬುಮ್ರಾ ಒಂದೇ ವರ್ಷದೊಳಗೆ ಟೆಸ್ಟ್ನಲ್ಲಿ 50 ವಿಕೆಟ್ ಕಬಳಿಸಿ ಈ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಈ ವರ್ಷ 11 ಟೆಸ್ಟ್ ಪಂದ್ಯಗಳನ್ನಾಡಿರುವ ಬುಮ್ರಾ ಇದುವರೆಗೆ 50 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇನ್ನೆರಡು ವಿಕೆಟ್ ಪಡೆದರೆ ಝಹೀರ್ ಖಾನ್ ಅವರ ದಾಖಲೆಯನ್ನು ಹಿಂದಿಕ್ಕಬಹುದು.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮಿಚೆಲ್ ಸ್ಟಾರ್ಕ್ ಅವರ ಮಿಂಚಿನ ದಾಳಿಗೆ ತತ್ತರಿಸಿದೆ. ಪರಿಣಾಮ ಕೇವಲ 180 ರನ್ಗಳಿಸಿ ಭಾರತ ತಂಡವು ಪ್ರಥಮ ಇನಿಂಗ್ಸ್ ಅಂತ್ಯಗೊಳಿಸಿದೆ. ಅತ್ತ ಮೊದಲ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡವು ಮೊದಲ ದಿನದಾಟದ ಮುಕ್ತಾಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 86 ರನ್ ಕಲೆಹಾಕಿದೆ.