
ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯದಿಂದ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಟೀಮ್ ಇಂಡಿಯಾ ಮೂಲಗಳ ಮಾಹಿತಿ ಪ್ರಕಾರ, ಕೊನೆಯ ಟೆಸ್ಟ್ ಪಂದ್ಯದ ವೇಳೆ ಬುಮ್ರಾ ವಿಶ್ರಾಂತಿ ಪಡೆಯಲಿದ್ದಾರೆ. ಅತ್ತ ಬುಮ್ರಾ ಹೊರಗುಳಿಯುತ್ತಿರುವ ಕಾರಣ ಅವರ ಬದಲಿಗೆ ಮತ್ತೋರ್ವ ವೇಗಿ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಜಸ್ಪ್ರೀತ್ ಬುಮ್ರಾ ಕೇವಲ 3 ಮ್ಯಾಚ್ಗಳನ್ನು ಮಾತ್ರ ಆಡಲಿದ್ದಾರೆ ಎನ್ನಲಾಗಿತ್ತು. ಬೆನ್ನು ನೋವಿನ ಸಮಸ್ಯೆಯ ಕಾರಣ ಅವರಿಗೆ ಹೆಚ್ಚಿನ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿತ್ತು. ಅದರ ಭಾಗವಾಗಿ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ವಿಶ್ರಾಂತಿ ನೀಡಲಾಗಿತ್ತು. ಆ ಬಳಿಕ 3ನೇ ಮತ್ತು 4ನೇ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಬುಮ್ರಾಗೆ ಇದೀಗ ಮತ್ತೆ ರೆಸ್ಟ್ ನೀಡಲು ನಿರ್ಧರಿಸಲಾಗಿದೆ.

ಇತ್ತ ಜಸ್ಪ್ರೀತ್ ಬುಮ್ರಾ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿತ್ತಿರುವ ಕಾರಣ, ಅವರ ಸ್ಥಾನದಲ್ಲಿ ಎಡಗೈ ವೇಗಿ ಅರ್ಷದೀಪ್ ಸಿಂಗ್ ಪಾದಾರ್ಪಣೆ ಮಾಡಲಿದ್ದಾರೆ ಎಂದು ಟೈಮ್ ಆಫ್ ಇಂಡಿಯಾ ವರದಿ ಮಾಡಿದೆ. ಹೀಗಾಗಿ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಅಂತಿಮ ಪಂದ್ಯದ ಮೂಲಕ ಅರ್ಷದೀಪ್ ಟೆಸ್ಟ್ ಕೆರಿಯರ್ ಆರಂಭಿಸುವುದನ್ನು ಎದುರು ನೋಡಬಹುದು.

ಇದಕ್ಕೂ ಮುನ್ನ ಅರ್ಷದೀಪ್ ಸಿಂಗ್ ಭಾರತದ ಪರ 63 ಟಿ20 ಹಾಗೂ 9 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 113 ವಿಕೆಟ್ ಕಬಳಿಸಿದ್ದಾರೆ. ಇದಾಗ್ಯೂ ಅವರಿಗೆ ರೆಡ್ ಬಾಲ್ ಕ್ರಿಕೆಟ್ನಲ್ಲಿ ಪಾದಾರ್ಪಣೆ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಅರ್ಷದೀಪ್ ಸಿಂಗ್ಗೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಭಾರತ ಟೆಸ್ಟ್ ತಂಡ: ಶುಭ್ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ರವೀಂದ್ರ ಜಡೇಜಾ, ಧ್ರುವ್ ಜುರೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಅನ್ಶುಲ್ ಕಂಬೋಜ್, ಎನ್. ಜಗದೀಸನ್ (ವಿಕೆಟ್ ಕೀಪರ್).