
ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ವಿಶೇಷ ದಾಖಲೆ ಬರೆದಿದ್ದಾರೆ. ಅದು ಸಹ ಮೂರು ಸ್ವರೂಪಗಳಲ್ಲೂ ಭಾರತದ ಪರ ಐವತ್ತು ಪಂದ್ಯಗಳನ್ನಾಡುವ ಮೂಲಕ ಎಂಬುದು ವಿಶೇಷ. ದೆಹಲಿಯಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮೂಲಕ ಬುಮ್ರಾ ಈ ಸಾಧನೆ ಮಾಡಿದ್ದಾರೆ.

ಜಸ್ಪ್ರೀತ್ ಬುಮ್ರಾಗೂ ಮುನ್ನ ಟೀಮ್ ಇಂಡಿಯಾ ಪರ 6 ಆಟಗಾರರು ಮಾತ್ರ ಮೂರು ಸ್ವರೂಪಗಳಲ್ಲೂ 50+ ಪಂದ್ಯಗಳನ್ನಾಡಿದ್ದರು. ಈ ಆರು ಆಟಗಾರರಲ್ಲಿ ಒಬ್ಬರೇ ಒಬ್ಬರು ವೇಗದ ಬೌಲರ್ ಇರಲಿಲ್ಲ ಎಂಬುದು ವಿಶೇಷ. ಇದೀಗ ಈ ಕೊರತೆಯನ್ನು ಜಸ್ಪ್ರೀತ್ ಬುಮ್ರಾ ನೀಗಿಸಿದ್ದಾರೆ.

ಬುಮ್ರಾ ಟೀಮ್ ಇಂಡಿಯಾ ಪರ ಟೆಸ್ಟ್ನಲ್ಲಿ 50 ಪಂದ್ಯಗಳನ್ನಾಡಿದರೆ, ಏಕದಿನ ಕ್ರಿಕೆಟ್ನಲ್ಲಿ 89 ಮ್ಯಾಚ್ಗಳನ್ನಾಡಿದ್ದಾರೆ. ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 75 ಪಂದ್ಯಗಳನ್ನಾಡಿದ್ದಾರೆ. ಈ ಮೂಲಕ ಭಾರತದ ಪರ ಮೂರು ಸ್ವರೂಪಗಳಲ್ಲೂ 50 ಪಂದ್ಯಗಳನ್ನಾಡಿದ್ದ ಮೊದಲ ವೇಗಿ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್, ರವೀಂದ್ರ ಜಡೇಜಾ, ಕೆಎಲ್ ರಾಹುಲ್ ಹಾಗೂ ರವಿಚಂದ್ರನ್ ಅಶ್ವಿನ್ ಮಾತ್ರ ಮೂರು ಸ್ವರೂಪಗಳಲ್ಲೂ ಕನಿಷ್ಠ 50 ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದರು.

ಇದೀಗ 31 ವರ್ಷದ ಜಸ್ಪ್ರೀತ್ ಬುಮ್ರಾ ಈ ಪಟ್ಟಿಗೆ 7ನೇ ಆಟಗಾರನಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಮೂರು ಸ್ವರೂಪಗಳಲ್ಲೂ ಕನಿಷ್ಠ 50 ಮ್ಯಾಚ್ಗಳನ್ನಾಡಿದ ಟೀಮ್ ಇಂಡಿಯಾದ ಮೊದಲ ವೇಗ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.