
ಇಂಗ್ಲೆಂಡ್ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಜೋ ರೂಟ್ (Joe Root) ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ 13 ಸಾವಿರ ರನ್ಗಳನ್ನು ಪೂರೈಸುವ ಮೂಲಕ. ನಾಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆಯುತ್ತಿರುವ ಝಿಂಬಾಬ್ವೆ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ರೂಟ್ 34 ರನ್ ಬಾರಿಸಿದ್ದಾರೆ.

ಈ 34 ರನ್ಗಳೊಂದಿಗೆ ಜೋ ರೂಟ್ ಟೆಸ್ಟ್ ಕ್ರಿಕೆಟ್ನಲ್ಲಿ 13 ಸಾವಿರ ರನ್ಗಳನ್ನು ಪೂರೈಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗವಾಗಿ 13000 ರನ್ಗಳನ್ನು ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ರೂಟ್ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಸೌತ್ ಆಫ್ರಿಕಾದ ಜಾಕ್ ಕಾಲಿಸ್ ಹೆಸರಿನಲ್ಲಿತ್ತು. 159 ಟೆಸ್ಟ್ ಪಂದ್ಯಗಳ ಮೂಲಕ ಕಾಲಿಸ್ 13 ಸಾವಿರ ರನ್ಗಳನ್ನು ಪೂರೈಸಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 13 ಸಾವಿರ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಈ ವಿಶ್ವ ದಾಖಲೆಯನ್ನು ಮುರಿಯುವಲ್ಲಿ ಜೋ ರೂಟ್ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ಪರ ಈವರೆಗೆ 153 ಪಂದ್ಯಗಳನ್ನಾಡಿರುವ ಜೋ ರೂಟ್ ಒಟ್ಟು 13006 ರನ್ ಕಲೆಹಾಕಿದ್ದಾರೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲೇ ಅತೀ ಕಡಿಮೆ ಪಂದ್ಯಗಳ ಮೂಲಕ 13 ಸಾವಿರ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆ ಬರೆದಿದ್ದಾರೆ.

ಸದ್ಯ 13006 ರನ್ ಕಲೆಹಾಕಿರುವ ಜೋ ರೂಟ್, ಟೆಸ್ಟ್ ರನ್ ಸರದಾರರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಮುಂಬರುವ ವರ್ಷಗಳಲ್ಲಿ 2915 ರನ್ ಕಲೆಹಾಕಿದರೆ, ಸಚಿನ್ ತೆಂಡೂಲ್ಕರ್ (15921) ಅವರನ್ನು ಹಿಂದಿಕ್ಕಿ ಜೋ ರೂಟ್ ಮೊದಲ ಸ್ಥಾನಕ್ಕೇರಬಹುದು. ಹೀಗಾಗಿ ರೂಟ್ ಇನ್ನೂ ಮೂರು ವರ್ಷ ಆಡಿದರೆ, ಟೆಸ್ಟ್ನಲ್ಲಿ ಹೊಸ ವಿಶ್ವ ದಾಖಲೆಯನ್ನು ಸಹ ನಿರೀಕ್ಷಿಸಬಹುದು.