
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ (Joe Root) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೂಟ್ ಆಕರ್ಷಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಆರಂಭದಲ್ಲಿ ತುಸು ಎಚ್ಚುರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೂ, ಆ ಬಳಿಕ ಬಾಝ್ಬಾಲ್ ಶೈಲಿಗೆ ವಾಲಿದರು.

ಪರಿಣಾಮ ಕೇವಲ 68 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅರ್ಧಶತಕದ ಬಳಿಕ ಕೂಡ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ರೂಟ್ 87 ರನ್ ಬಾರಿಸಿ ಶತಕದಂಚಿನಲ್ಲಿ ವಿಕೆಟ್ ಒಪ್ಪಿಸಿದರು. ಈ 87 ರನ್ಗಳೊಂದಿಗೆ ಜೋ ರೂಟ್ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಮೈಲುಗಲ್ಲನ್ನು ದಾಟಿದ್ದಾರೆ. ಅದು ಕೂಡ ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.

ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ನ ಮಾಜಿ ನಾಯಕ ಬ್ರಿಯಾನ್ ಲಾರಾ 7ನೇ ಸ್ಥಾನದಲ್ಲಿದ್ದರು. 232 ಟೆಸ್ಟ್ ಇನಿಂಗ್ಸ್ ಆಡಿರುವ ಲಾರಾ ಒಟ್ಟು 11953 ರನ್ ಕಲೆಹಾಕುವ ಮೂಲಕ ಈ ವಿಶೇಷ ಸಾಧನೆ ಮಾಡಿದ್ದರು. ಇದೀಗ ಲಾರಾ ಅವರನ್ನು ಹಿಂದಿಕ್ಕುವಲ್ಲಿ ರೂಟ್ ಯಶಸ್ವಿಯಾಗಿದ್ದಾರೆ.

143 ಟೆಸ್ಟ್ ಪಂದ್ಯಗಳಲ್ಲಿ 261 ಇನಿಂಗ್ಸ್ ಆಡಿರುವ ಜೋ ರೂಟ್ ಈವರೆಗೆ ಒಟ್ಟು 12027 ರನ್ ಕಲೆಹಾಕಿದ್ದಾರೆ. ಈ ಮೂಲಕ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ವಿಶ್ವದ 7ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಹಾಗೆಯೇ ಟೆಸ್ಟ್ ಕ್ರಿಕೆಟ್ನಲ್ಲಿ 12 ಸಾವಿರ ರನ್ ಪೂರೈಸಿದ ಇಂಗ್ಲೆಂಡ್ನ 2ನೇ ಬ್ಯಾಟರ್ ಹಾಗೂ ವಿಶ್ವದ 7ನೇ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಕೂಡ ಜೋ ರೂಟ್ ತಮ್ಮದಾಗಿಸಿಕೊಂಡಿದ್ದಾರೆ. ಜೋ ರೂಟ್ಗಿಂತ ಮೊದಲು ಇಂಗ್ಲೆಂಡ್ನ ಮಾಜಿ ನಾಯಕ ಅಲಿಸ್ಟರ್ ಕುಕ್ (12472) ಈ ಸಾಧನೆ ಮಾಡಿದ್ದರು. ಇದೀಗ 12027 ರನ್ ಕಲೆಹಾಕಿರುವ ರೂಟ್ ಮುಂಬರುವ ಪಂದ್ಯಗಳಲ್ಲಿ 445 ರನ್ ಬಾರಿಸಿದರೆ ಇಂಗ್ಲೆಂಡ್ ಪರ ಟೆಸ್ಟ್ನಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

ಇನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ವಿಶ್ವ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಟೀಮ್ ಇಂಡಿಯಾ ಪರ 200 ಟೆಸ್ಟ್ ಪಂದ್ಯಗಳಲ್ಲಿ 329 ಇನಿಂಗ್ಸ್ ಆಡಿರುವ ಸಚಿನ್ 51 ಶತಕ ಹಾಗೂ 68 ಅರ್ಧಶತಕಗಳೊಂದಿಗೆ ಒಟ್ಟು 15921 ರನ್ ಕಲೆಹಾಕಿದ್ದಾರೆ. ಈ ಮೂಲಕ ಟೆಸ್ಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.