Updated on: May 07, 2022 | 7:21 PM
ಐಪಿಎಲ್ ಸೀಸನ್ 15 ನಲ್ಲಿ ಜೋಸ್ ಬಟ್ಲರ್ ಅಬ್ಬರ ಮುಂದುವರೆದಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ಬಟ್ಲರ್ ಕೇವಲ 16 ಎಸೆತಗಳಲ್ಲಿ 30 ರನ್ ಬಾರಿಸಿದ್ದರು. ಇದರೊಂದಿಗೆ ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ವಿಶೇಷ ದಾಖಲೆಯನ್ನೂ ಕೂಡ ಬರೆದರು.
ಪಂಜಾಬ್ ಕಿಂಗ್ಸ್ ವಿರುದ್ಧ 13 ರನ್ ಗಳಿಸಿಸುವುದರೊಂದಿಗೆ ಬಟ್ಲರ್, ಐಪಿಎಲ್ 2022 ರಲ್ಲಿ 600 ರನ್ ಪೂರೈಸಿದರು. ಈ ಮೂಲಕ ಐಪಿಎಲ್‌ನಲ್ಲಿ 600 ರನ್ ಗಳಿಸಿದ ರಾಜಸ್ಥಾನ್ ರಾಯಲ್ಸ್ ತಂಡದ ಮೊದಲ ಆಟಗಾರ ಎಂಬ ದಾಖಲೆಯನ್ನು ಬಟ್ಲರ್ ಬರೆದರು. ಇದಕ್ಕೂ ಮುನ್ನ ಅಜಿಂಕ್ಯ ರಹಾನೆ 2012ರಲ್ಲಿ ಗರಿಷ್ಠ 560 ರನ್ ಗಳಿಸಿದ್ದು ದಾಖಲೆಯಾಗಿತ್ತು.
ಇದೀಗ ಈ ಬಾರಿಯ ಐಪಿಎಲ್‌ನಲ್ಲಿ 618 ರನ್ ಗಳಿಸುವ ಮೂಲಕ ಜೋಸ್ ಬಟ್ಲರ್ ರಾಜಸ್ಥಾನ್ ರಾಯಲ್ಸ್ ಪರ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ ಆರೆಂಜ್ ಕ್ಯಾಪ್ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಬಟ್ಲರ್ 11 ಇನ್ನಿಂಗ್ಸ್‌ಗಳಲ್ಲಿ 618 ರನ್ ಗಳಿಸಿದ್ದಾರೆ. ಇನ್ನು ರಾಜಸ್ಥಾನ್ ರಾಯಲ್ಸ್ಗೆ ಲೀಗ್ ಹಂತದಲ್ಲಿ 3 ಪಂದ್ಯಗಳು ಉಳಿದಿದ್ದು, ಹೀಗಾಗಿ ಅದ್ಭುತ ಫಾರ್ಮ್ನಲ್ಲಿರುವ ಬಟ್ಲರ್ ಬ್ಯಾಟ್ನಿಂದ ಮತ್ತಷ್ಟು ರನ್ ಹರಿದು ಬರುವ ನಿರೀಕ್ಷೆಯಿದೆ.
ಸದ್ಯ ಐಪಿಎಲ್ನ ಒಂದೇ ಸೀಸನ್ನಲ್ಲಿ ಅತ್ಯಧಿಕ ರನ್ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 2016 ರಲ್ಲಿ 973 ರನ್ ಬಾರಿಸಿ ದಾಖಲೆ ಬರೆದಿದ್ದರು. ಇದೀಗ 618 ರನ್ಗಳಿಸಿರುವ ಜೋಸ್ ಬಟ್ಲರ್ ವಿರಾಟ್ ಕೊಹ್ಲಿಯ ದಾಖಲೆಯನ್ನು ಹಿಂದಿಕ್ಕಲಿದ್ದಾರಾ ಕಾದುನೋಡಬೇಕಿದೆ.