
ಸೌತ್ ಆಫ್ರಿಕಾ ಬೌಲರ್ ಕಗಿಸೊ ರಬಾಡ (Kagiso Rabada) ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ವರ್ಲ್ಡ್ ರೆಕಾರ್ಡ್ ನಿರ್ಮಾಣವಾಗಿದ್ದು ಬೌಲಿಂಗ್‌ನಿಂದ ಅಲ್ಲ. ಬದಲಾಗಿ ಬ್ಯಾಟಿಂಗ್‌ನಿಂದ ಎಂಬುದು ವಿಶೇಷ.

ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 11ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಗಿಸೊ ರಬಾಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಬಿರುಸಿನ ಬ್ಯಾಟಿಂಗ್‌ನೊಂದಿಗೆ ಪಾಕ್ ಬೌಲರ್‌ಗಳನ್ನು ಚೆಂಡಾಡಿದ ರಬಾಡ ಭರ್ಜರಿ ಅರ್ಧಶತಕ ಬಾರಿಸಿದರು. ಅದು ಕೂಡ ಕೇವಲ 38 ಎಸೆತಗಳಲ್ಲಿ..!

ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 11ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಸ್ಫೋಟಕ ಅರ್ಧಶತಕ ಸಿಡಿಸಿದ ಸೌತ್ ಆಫ್ರಿಕಾದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಅಂತಿಮ ಕ್ರಮಾಂಕದಲ್ಲಿ ಬ್ಯಾಟ್ ವಿಸ್ಫೋಟಕ ಹಾಫ್ ಸೆಂಚುರಿ ಸಿಡಿಸಿದ ವಿಶ್ವದ 2ನೇ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ವೆಸ್ಟ್ ಇಂಡೀಸ್‌ನ ಶೇನ್ ಶಿಲ್ಲಿಂಗ್ ಫೋರ್ಡ್. 2014 ರಲ್ಲಿ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ 11ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿಲ್ಲಿಂಗ್ ಫೋರ್ಡ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ ಪಾಕ್ ಬೌಲರ್‌ಗಳನ್ನು ಚೆಂಡಾಡಿ ಕೇವಲ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಕಗಿಸೊ ರಬಾಡ ಈ ವಿಶ್ವ ದಾಖಲೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ಅಷ್ಟೇ ಅಲ್ಲದೇ 11ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಏಷ್ಯಾ ಪಿಚ್ ನಲ್ಲಿ ಅತೀ ವೇಗದ ಹಾಫ್ ಸೆಂಚುರಿ ಸಿಡಿಸಿದ ಹೆಗ್ಗಳಿಕೆಯನ್ನು ರಬಾಡ ತಮ್ಮದಾಗಿಸಿಕೊಂಡಿದ್ದಾರೆ.

Kagiso Rabada
Published On - 7:30 am, Thu, 23 October 25