
ಬರೋಬ್ಬರಿ 1 ವರ್ಷಗಳ ಬಳಿಕ ಕೇನ್ ವಿಲಿಯಮ್ಸನ್ (Kane Williamson) ಟೆಸ್ಟ್ ಕ್ರಿಕೆಟ್ಗೆ ಮರಳಿದ್ದಾರೆ. ಈ ಮರಳುವಿಕೆಯ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಬಾರಿಸಿ ವಿಶೇಷ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲೇ ಈ ಸಾಧನೆ ಮಾಡಿದ ನ್ಯೂಝಿಲೆಂಡ್ನ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಕ್ರೈಸ್ಟ್ಚರ್ಚ್ನ ಹೆಂಗ್ಲೆ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಬೌಲಿಂಗ್ ಆಯ್ದುಕೊಂಡಿದೆ. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ಮೊದಲ ಓವರ್ನಲ್ಲೇ ಡೆವೊನ್ ಕಾನ್ವೆ (0) ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರೀಸ್ಗೆ ಆಗಮಿಸಿದ ಕೇನ್ ವಿಲಿಯಮ್ಸನ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.

ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ ಕೇನ್ ವಿಲಿಯಮ್ಸನ್ 102 ಎಸೆತಗಳನ್ನು ಎದುರಿಸಿ 6 ಫೋರ್ಗಳೊಂದಿಗೆ 52 ರನ್ ಬಾರಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಕ್ರಿಕೆಟ್ನಲ್ಲಿ 1000 ರನ್ ಪೂರೈಸಿದ ನ್ಯೂಝಿಲೆಂಡ್ನ 2ನೇ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮುನ್ನ ರಾಸ್ ಟೇಲರ್ (1136) ಈ ಸಾಧನೆ ಮಾಡಿದ್ದರು.

ಇದೀಗ ವೆಸ್ಟ್ ಇಂಡೀಸ್ ವಿರುದ್ಧ 18 ಇನಿಂಗ್ಸ್ಗಳಲ್ಲಿ ಸಾವಿರ ರನ್ ಪೂರೈಸುವ ಮೂಲಕ ಕೇನ್ ವಿಲಿಯಮ್ಸನ್ ಐದು ದೇಶಗಳ ವಿರುದ್ಧ ಟೆಸ್ಟ್ನಲ್ಲಿ 1000+ ರನ್ ಕಲೆಹಾಕಿದ ನ್ಯೂಝಿಲೆಂಡ್ನ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಅವರು ಇಂಗ್ಲೆಂಡ್, ಪಾಕಿಸ್ತಾನ್, ಸೌತ್ ಆಫ್ರಿಕಾ ಮತ್ತು ಶ್ರೀಲಂಕಾ ವಿರುದ್ಧ ಟೆಸ್ಟ್ನಲ್ಲಿ 1000+ ರನ್ ಕಲೆಹಾಕಿದ್ದರು.

ಇದೀಗ ವೆಸ್ಟ್ ಇಂಡೀಸ್ ವಿರುದ್ಧ 1022 ರನ್ಗಳಿಸುವ ಮೂಲಕ ಐದು ದೇಶಗಳ ವಿರುದ್ಧ ಟೆಸ್ಟ್ನಲ್ಲಿ ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅಷ್ಟೇ ಅಲ್ಲದೆ ಈ ಸಾಧನೆ ಮಾಡಿದ ನ್ಯೂಝಿಲೆಂಡ್ನ ಏಕೈಕ ಬ್ಯಾಟರ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.