Kane Williamson: ಹೊಸ ವಿಶ್ವ ದಾಖಲೆ ನಿರ್ಮಿಸಿದ ಕೇನ್ ವಿಲಿಯಮ್ಸನ್
New Zealand vs South Africa: ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಕಿವೀಸ್ ಪಡೆ 2 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಇದು ಸೌತ್ ಆಫ್ರಿಕಾ ವಿರುದ್ಧದ ನ್ಯೂಝಿಲೆಂಡ್ನ ಮೊದಲ ಟೆಸ್ಟ್ ಸರಣಿ ಗೆಲುವು ಎಂಬುದು ವಿಶೇಷ.
Updated on: Feb 17, 2024 | 11:05 AM

ಹ್ಯಾಮಿಲ್ಟನ್ ಸೇಡನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸುವ ಮೂಲಕ ಕೇನ್ ವಿಲಿಯಮ್ಸನ್ (Kane Williamson) ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಲಿಯಮ್ಸನ್ ಅಜೇಯ 133 ರನ್ ಬಾರಿಸಿದ್ದರು.

ಈ ಭರ್ಜರಿ ಸೆಂಚುರಿಯೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 4ನೇ ಇನಿಂಗ್ಸ್ನಲ್ಲಿ ಅತೀ ಹೆಚ್ಚು ಬಾರಿ ಶತಕ ಬಾರಿಸಿದ ಬ್ಯಾಟರ್ ಎನಿಸಿಕೊಂಡರು. ಅದು ಕೂಡ ಪಾಕಿಸ್ತಾನದ ಮಾಜಿ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ ಯೂನಿಸ್ ಖಾನ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

ಅಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 4ನೇ ಇನಿಂಗ್ಸ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ದಾಖಲೆ ಯೂನಿಸ್ ಖಾನ್ ಹೆಸರಿನಲ್ಲಿತ್ತು. ಕೊನೆಯ ಇನಿಂಗ್ಸ್ನಲ್ಲಿ 40 ಬಾರಿ ಬ್ಯಾಟ್ ಬೀಸಿದ್ದ ಪಾಕ್ ಆಟಗಾರ ಒಟ್ಟು 5 ಶತಕಗಳನ್ನು ಸಿಡಿಸಿ ವಿಶ್ವ ದಾಖಲೆ ಬರೆದಿದ್ದರು.

ಇದೀಗ ನಾಲ್ಕನೇ ಇನಿಂಗ್ಸ್ನಲ್ಲಿ 26 ಬಾರಿ ಬ್ಯಾಟಿಂಗ್ ಮಾಡಿರುವ ಕೇನ್ ವಿಲಿಯಮ್ಸನ್ ಒಟ್ಟು 5 ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಕೊನೆಯ ಇನಿಂಗ್ಸ್ನಲ್ಲಿ ಅತೀ ಹೆಚ್ಚು ಬಾರಿ ಸೆಂಚುರಿ ಸಿಡಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ ವಿಶೇಷ ವಿಶ್ವ ದಾಖಲೆಯನ್ನು ಕೇನ್ ವಿಲಿಯಮ್ಸನ್ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಈ ಶತಕದೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ 32 ಸೆಂಚುರಿಗಳನ್ನು ಪೂರೈಸಿದ ವಿಶ್ವ ದಾಖಲೆ ಕೂಡ ಕೇನ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 174 ಇನಿಂಗ್ಸ್ಗಳ ಮೂಲಕ ಈ ಸಾಧನೆ ಮಾಡಿದ್ದರು.

ಇದೀಗ 172 ಇನಿಂಗ್ಸ್ಗಳ ಮೂಲಕ 32 ಶತಕ ಸಿಡಿಸಿ ಕೇನ್ ವಿಲಿಯಮ್ಸನ್ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಇದಲ್ಲದೆ ಸಕ್ರೀಯ ಟೆಸ್ಟ್ ಬ್ಯಾಟರ್ಗಳ ಪಟ್ಟಿಯಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ದಾಖಲೆಯನ್ನು ಸ್ಮಿತ್ ಜೊತೆ ಹಂಚಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಸ್ಮಿತ್ ಹಾಗೂ ಕೇನ್ ವಿಲಿಯಮ್ಸನ್ 32 ಶತಕಗಳೊಂದಿಗೆ ಜಂಟಿಯಾಗಿ ಅಗ್ರಸ್ಥಾನ ಅಲಂಕರಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಕಳೆದ 7 ಟೆಸ್ಟ್ ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ 7 ಸೆಂಚುರಿಗಳನ್ನು ಸಿಡಿಸಿರುವ ಕೇನ್ ವಿಲಿಯಮ್ಸನ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಸಾಗುತ್ತಿದ್ದಾರೆ. ಈ ದಾಖಲೆಗಳೊಂದಿಗೆ ಹಲವು ವಿಶ್ವ ದಾಖಲೆಗಳನ್ನು ತಮ್ಮದಾಗಿಸಿಕೊಳ್ಳುತ್ತಿರುವುದು ವಿಶೇಷ.
