
ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಬಾರಿಸಿ ಕೇನ್ ವಿಲಿಯಮ್ಸನ್ ವಿಶೇಷ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ವಿಲಿಯಮ್ಸನ್ ಮೊದಲ ಇನಿಂಗ್ಸ್ನಲ್ಲಿ 118 ರನ್ ಬಾರಿಸಿದ್ದರು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ 109 ರನ್ ಚಚ್ಚಿದ್ದರು.

ಇದರೊಂದಿಗೆ ನ್ಯೂಝಿಲೆಂಡ್ ಪರ ಟೆಸ್ಟ್ ಪಂದ್ಯವೊಂದರಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿದ 5ನೇ ಬ್ಯಾಟರ್ ಎನಿಸಿಕೊಂಡರು. ಅಷ್ಟೇ ಅಲ್ಲದೆ ಈ ಎರಡು ಶತಕಗಳೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ 31 ಶತಕಗಳನ್ನು ಪೂರೈಸಿದ ವಿಶ್ವದ 2ನೇ ಬ್ಯಾಟರ್ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ಸ್ಟೀವ್ ಸ್ಮಿತ್ ಹೆಸರಿನಲ್ಲಿತ್ತು. ಆಸ್ಟ್ರೇಲಿಯಾದ ಟೆಸ್ಟ್ ಸ್ಪೆಷಲಿಸ್ಟ್ ಸ್ಮಿತ್ 170 ಇನಿಂಗ್ಸ್ಗಳ ಮೂಲಕ 31 ಶತಕ ಬಾರಿಸಿ ದಾಖಲೆ ಬರೆದಿದ್ದಾರೆ. ಇದೀಗ ಈ ದಾಖಲೆಯನ್ನು ಕೇನ್ ವಿಲಿಯಮ್ಸನ್ ಸರಿಗಟ್ಟಿದ್ದಾರೆ.

ಕೇನ್ ವಿಲಿಯಮ್ಸನ್ ಕೂಡ 170 ಇನಿಂಗ್ಸ್ಗಳ ಮೂಲಕ 31 ಸೆಂಚುರಿಗಳನ್ನು ಸಿಡಿಸಿದ್ದಾರೆ. ಈ ಮೂಲಕ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ 31 ಟೆಸ್ಟ್ ಶತಕ ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಸ್ಮಿತ್ ಜೊತೆ ಜಂಟಿಯಾಗಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಕ್ರಿಕೆಟ್ ದೇವರು ಟೆಸ್ಟ್ನಲ್ಲಿ 31 ಶತಕಗಳನ್ನು ಬಾರಿಸಲು ತೆಗೆದುಕೊಂಡಿದ್ದು ಕೇವಲ 165 ಇನಿಂಗ್ಸ್ಗಳು ಮಾತ್ರ. ಇದು ಕೂಡ ವಿಶ್ವ ದಾಖಲೆಯಾಗಿ ಉಳಿದಿದೆ.

ಬೃಹತ್ ಮೊತ್ತ ಕಲೆಹಾಕಿದ ನ್ಯೂಝಿಲೆಂಡ್: ಸೌತ್ ಆಫ್ರಿಕಾ ವಿರುದ್ಧದ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಕೇನ್ ವಿಲಿಯಮ್ಸನ್ (118) ಶತಕ ಬಾರಿಸಿದರೆ, ರಚಿನ್ ರವೀಂದ್ರ (240) ದ್ವಿಶತಕ ಸಿಡಿಸಿದ್ದರು. ಈ ಮೂಲಕ ನ್ಯೂಝಿಲೆಂಡ್ ಮೊದಲ ಇನಿಂಗ್ಸ್ನಲ್ಲಿ 511 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಸೌತ್ ಆಫ್ರಿಕಾ ತಂಡವು 162 ರನ್ಗಳಿಗೆ ಆಲೌಟ್ ಆಗಿದೆ.

ಇನ್ನು ದ್ವಿತೀಯ ಇನಿಂಗ್ಸ್ ಶುರು ಮಾಡಿರುವ ನ್ಯೂಝಿಲೆಂಡ್ ಪರ ನಾಯಕ ಕೇನ್ ವಿಲಿಯಮ್ಸನ್ (109) ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ದ್ವಿತೀಯ ಇನಿಂಗ್ಸ್ನಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿ ನ್ಯೂಝಿಲೆಂಡ್ ಡಿಕ್ಲೇರ್ ಘೋಷಿಸಿದೆ. ಅದರಂತೆ ಇದೀಗ 529 ರನ್ಗಳ ಗುರಿ ಪಡೆದಿರುವ ಸೌತ್ ಆಫ್ರಿಕಾ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 52 ಓವರ್ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 143 ರನ್ ಕಲೆಹಾಕಿದೆ.