Kane Williamson: ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೇನ್ ವಿಲಿಯಮ್ಸನ್
TV9 Web | Updated By: ಝಾಹಿರ್ ಯೂಸುಫ್
Updated on:
Feb 06, 2024 | 12:24 PM
Kane Williamson Records: ಸೌತ್ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡು ಇನಿಂಗ್ಸ್ಗಳಲ್ಲೂ ಭರ್ಜರಿ ಶತಕಗಳನ್ನು ಸಿಡಿಸಿದ ನ್ಯೂಝಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ...
1 / 7
ನ್ಯೂಝಿಲೆಂಡ್ನ ಮೌಂಟ್ ಮೌಂಗನುಯಿ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ (Kane Williamson) ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ 289 ಎಸೆತಗಳಲ್ಲಿ 16 ಫೋರ್ಗಳೊಂದಿಗೆ 118 ರನ್ ಬಾರಿಸಿದ್ದ ನ್ಯೂಝಿಲೆಂಡ್ ನಾಯಕ ಇದೀಗ ದ್ವಿತೀಯ ಇನಿಂಗ್ಸ್ನಲ್ಲೂ ಮೂರಂಕಿ ಮೊತ್ತ ಕಲೆಹಾಕಿದ್ದಾರೆ.
2 / 7
ದ್ವಿತೀಯ ಇನಿಂಗ್ಸ್ನಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಲಿಯಮ್ಸನ್ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದರು. ಅದರಂತೆ ಸೌತ್ ಆಫ್ರಿಕಾ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಕೇನ್ 132 ಎಸೆತಗಳಲ್ಲಿ 1 ಭರ್ಜರಿ ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 109 ರನ್ ಬಾರಿಸಿದ್ದರು.
3 / 7
ಇದರೊಂದಿಗೆ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ಗಳಲ್ಲೂ ಶತಕ ಬಾರಿಸಿದ ನ್ಯೂಝಿಲೆಂಡ್ನ 5ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಷ್ಟೇ ಅಲ್ಲದೆ ಪ್ರಸ್ತುತ ಟೆಸ್ಟ್ ಆಟಗಾರರಲ್ಲಿ ಅತ್ಯಧಿಕ ಶತಕ ಸಿಡಿಸಿದ ಬ್ಯಾಟ್ಸ್ಮನ್ ಪಟ್ಟಿಯಲ್ಲೂ ವಿಲಿಯಮ್ಸನ್ ದ್ವಿತೀಯ ಸ್ಥಾನಕ್ಕೇರಿದ್ದಾರೆ.
4 / 7
ಸದ್ಯ ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅಗ್ರಸ್ಥಾನದಲ್ಲಿದ್ದಾರೆ. ಸ್ಮಿತ್ 107 ಟೆಸ್ಟ್ ಪಂದ್ಯಗಳಿಂದ ಒಟ್ಟು 32 ಶತಕ ಬಾರಿಸಿ ಅತೀ ಹೆಚ್ಚು ಸೆಂಚುರಿ ಸಿಡಿಸಿದ ಸಕ್ರೀಯ ಬ್ಯಾಟರ್ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ.
5 / 7
ಇದೀಗ 97 ಟೆಸ್ಟ್ ಪಂದ್ಯಗಳಲ್ಲಿ 31 ಶತಕಗಳನ್ನು ಪೂರೈಸಿರುವ ಕೇನ್ ವಿಲಿಯಮ್ಸನ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಜೋ ರೂಟ್ (30 ಶತಕಗಳು) ಇದ್ದರೆ, ನಾಲ್ಕನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ (29 ಶತಕಗಳು) ಕಾಣಿಸಿಕೊಂಡಿದ್ದಾರೆ.
6 / 7
ಬೃಹತ್ ಮೊತ್ತ ಕಲೆಹಾಕಿದ ನ್ಯೂಝಿಲೆಂಡ್: ಸೌತ್ ಆಫ್ರಿಕಾ ವಿರುದ್ಧದ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಕೇನ್ ವಿಲಿಯಮ್ಸನ್ (118) ಶತಕ ಬಾರಿಸಿದರೆ, ರಚಿನ್ ರವೀಂದ್ರ (240) ದ್ವಿಶತಕ ಸಿಡಿಸಿದ್ದರು. ಈ ಮೂಲಕ ನ್ಯೂಝಿಲೆಂಡ್ ಮೊದಲ ಇನಿಂಗ್ಸ್ನಲ್ಲಿ 511 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಸೌತ್ ಆಫ್ರಿಕಾ ತಂಡವು 162 ರನ್ಗಳಿಗೆ ಆಲೌಟ್ ಆಗಿದೆ.
7 / 7
ಇನ್ನು ದ್ವಿತೀಯ ಇನಿಂಗ್ಸ್ ಶುರು ಮಾಡಿರುವ ನ್ಯೂಝಿಲೆಂಡ್ ಪರ ನಾಯಕ ಕೇನ್ ವಿಲಿಯಮ್ಸನ್ (109) ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ದ್ವಿತೀಯ ಇನಿಂಗ್ಸ್ನಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿ ನ್ಯೂಝಿಲೆಂಡ್ ಡಿಕ್ಲೇರ್ ಘೋಷಿಸಿದೆ. ಅದರಂತೆ ಇದೀಗ 529 ರನ್ಗಳ ಗುರಿ ಪಡೆದಿರುವ ಸೌತ್ ಆಫ್ರಿಕಾ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 52 ಓವರ್ಗಳ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 143 ರನ್ ಕಲೆಹಾಕಿದೆ.