
ಕಳೆದೊಂದು ವಾರದಿಂದ ಕ್ರಿಕೆಟ್ ಲೋಕದಲ್ಲಿ ಕೇವಲ ವಿರಾಟ್ ಕೊಹ್ಲಿ ಅವರದ್ದೇ ಸುದ್ದಿ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಆಡಿದ ಮಾತುಗಳ ಪೆಟ್ಟಿನ ಏಟಿನ ನೋವು ಇನ್ನೂ ಕಡಿಮೆಯಾಗಿಲ್ಲ. ಕೊಹ್ಲಿ ಅವರನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿದ ಕೂಡಲೇ ಹುಟ್ಟಿಕೊಂಡ ಸಾಕಷ್ಟು ಗಾಸಿಪ್ಗಳು ಇನ್ನೂ ಮುಂದುವರೆಯುತ್ತಲೇ ಇದೆ. ಒಟ್ಟಾರೆಯಾಗಿ ಮೇಲ್ನೋಟಕ್ಕೆ ಬಿಸಿಸಿಐ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ರೀತಿ ಪ್ರಕಾರ ಕೆಳಗಿಳಿಸಿಲ್ಲ ಎಂಬುದು ಗೊತ್ತಾಗಿದೆ.

ಈ ವಿವಾದ ಭಾರತೀಯ ಕ್ರಿಕೆಟ್ನಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಉಳಿಯುವುದು ಖಚಿತ. ಇದರ ನಡುವೆ ಅನೇಕ ಮಾಜಿ ಕ್ರಿಕೆಟಿಗರು ಈ ಬೆಳವಣಿಗೆಗಳ ಬಗ್ಗೆ ಸಾಕಷ್ಟು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಕೀರ್ತಿ ಆಜಾದ್ ಈ ವಿಚಾರವಾಗಿ ಮಾತನಾಡಿದ್ದು ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ದಾರೆ.

ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರು ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿದ ಬಗ್ಗೆ ಅವರಿಗೆ ಕರೆ ಮಾಡಿ ತಿಳಿಸುವ ಮುನ್ನ ಅಧ್ಯಕ್ಷ ಸೌರವ್ ಗಂಗೂಲಿ ಬಳಿ ಅನುಮತಿ ಪಡೆಯಬೇಕಿತ್ತು. ಇದು ನಿಯಮ ಆಗಿದೆ. ಅಧ್ಯಕ್ಷರ ಅನುಮತಿ ಪಡೆಯದೆ ಈರೀತಿ ಮುಂದುವರೆಯುವ ಹಾಗಿಲ್ಲ ಎಂದು ಕೀರ್ತಿ ಆಜಾದ್ ಹೇಳಿದ್ದಾರೆ.

ಯಾವುದೇ ಮಾದರಿಯ ಕ್ರಿಕೆಟ್ನಲ್ಲಿ ನಾಯಕನ ಬದಲಾವಣೆ ಆಗಬೇಕು ಎಂದಾದರೆ ಆ ವಿಚಾರವನ್ನು ಅಧ್ಯಕ್ಷರಿಗೆ ತಿಳಿಸಬೇಕು. ಅವರು ಸಹಿ ಮಾಡಿದ ನಂತರ ಮುಂದುವರೆಯಬೇಕು. ವಿರಾಟ್ ಅಸಮಾಧಾನಗೊಂಡಿರುವುದಿಲ್ಲ. ಬದಲಾಗಿ ಅವರು ತನ್ನನ್ನು ನಡೆಸಿಕೊಂಡ ರೀತಿಗೆ ನೋವು ಪಟ್ಟಿರುತ್ತಾರೆ. ಈ ವಿಚಾರ ತಿಳಿದ ಕೂಡಲೆ ಗಂಗೂಲಿ ಕೂಡ ಕೊಹ್ಲಿ ಜೊತೆ ಮಾತನಾಡಬಹುದಿತ್ತು ಎಂಬುದು ಕೀರ್ತಿ ಆಜಾದ್ ಅಭಿಪ್ರಾಯ.

ಎಲ್ಲಾ ಆಯ್ಕೆದಾರರು ನಿಜವಾಗಿಯೂ ಉತ್ತಮ ವ್ಯಕ್ತಿಗಳು, ಆದರೆ ನೀವು ಅವರು ಆಡಿದ ಒಟ್ಟು ಪಂದ್ಯಗಳ ಲೆಕ್ಕ ಹಾಕಿದರೆ, ಅದು ವಿರಾಟ್ ಕೊಹ್ಲಿ ಆಡಿದ ಅರ್ಧ ಪಂದ್ಯಗಳ್ಳಷ್ಟೂ ಇರುವುದುಲ್ಲ ಎಂದು ಭಾರತದ ಮಾಜಿ ಆಲ್ ರೌಂಡರ್ ಖಡಕ್ ಆಗಿ ಹೇಳಿದ್ದಾರೆ.

ಇನ್ನು ಸುನೀಲ್ ಗವಾಸ್ಕರ್ ಕೂಡ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ. ವಿರಾಟ್ ತನ್ನ ವಿದಾಯ ಪತ್ರದಲ್ಲಿ ಬರೆದ ಸಾಲಿನಿಂದ ಬಿಸಿಸಿಐನ ಉನ್ನತ ಅಧಿಕಾರಿಗಳ ಭಾವನೆಗಳಿಗೆ ನೋವುಂಟು ಮಾಡಿರಬಹುದು ಎಂದಿದ್ದಾರೆ. ವಿದಾಯ ಪತ್ರದಲ್ಲಿ ವಿರಾಟ್, "ಇನ್ನು ಮುಂದೆ ನಾನು ಏಕದಿನ ಮತ್ತು ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯುತ್ತೇನೆ" ಎಂದು ಬರೆದುಕೊಂಡಿದ್ದರು. ಈ ಸಾಲುಗಳು ಅವರ ವಿರುದ್ಧ ಈ ಸಣ್ಣ ವಿರೋಧಿ ಭಾವನೆ ಇರಲು ಒಂದು ಕಾರಣವಾಗಿರಬಹುದು ಎಂಬುದು ಗವಾಸ್ಕರ್ ಅಭಿಪ್ರಾಯ.

ಈಗ ಏಕದಿನ ಮತ್ತು ಟಿ20 ನಾಯಕತ್ವದ ಹೊರೆ ಇಲ್ಲದ ಕಾರಣ ಟೆಸ್ಟ್ ಕ್ರಿಕೆಟ್ನಲ್ಲಿ ಮಾತ್ರ ತಂಡವನ್ನು ಕೊಹ್ಲಿ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಕೊಹ್ಲಿ ಅವರನ್ನು ನಾವು ಎರಡು ವರ್ಷಗಳ ಹಿಂದಿನ ರೀತಿಯಲ್ಲಿ ನೋಡಬಹುದು, ಶತಕದ ಬೆನ್ನಲ್ಲೇ ಮತ್ತೊಂದು ಶತಕ ಸಿಡಿಸುವ ರೀತಿ ಎಂದು ಗವಾಸ್ಕರ್ ಹೇಳಿದ್ದಾರೆ.