
2024ರ ಐಪಿಎಲ್‌ನಲ್ಲಿ ಇದುವರೆಗೆ 23 ಪಂದ್ಯಗಳನ್ನು ಆಡಲಾಗಿದೆ. ಲೀಗ್‌ನಲ್ಲಿ ಕೆಲವು ತಂಡಗಳು 5 ಮತ್ತು ಕೆಲವು 4 ಪಂದ್ಯಗಳನ್ನು ಆಡಿವೆ. ಪ್ರಸ್ತುತ ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಅಗ್ರಸ್ಥಾನದಲ್ಲಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ಎರಡನೇ ಸ್ಥಾನದಲ್ಲಿದೆ.

ಕಳೆದ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಸೋತಿದ್ದ ಕೆಕೆಆರ್ ಲೀಗ್‌ನಲ್ಲಿ ಮೊದಲ ಸೋಲನ್ನು ಎದುರಿಸಿದ್ದನ್ನು ಬಿಟ್ಟರೆ ಉಳಿದಂತೆ ತಂಡದ ಪ್ರದರ್ಶನ ಉತ್ತಮವಾಗಿದೆ. ಇದುವರೆಗೆ ತಂಡ ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 1ರಲ್ಲಿ ಸೋತಿದೆ.

17ನೇ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕೆಕೆಆರ್‌ಗೆ ಈ ನಡುವೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ಅದರಂತೆ ಇಂಜುರಿಯಿಂದಾಗಿ ಇದುವರೆಗೆ ಈ ಸೀಸನ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಆಡಿದ್ದ ಸ್ಟಾರ್ ಕ್ರಿಕೆಟಿಗ ಹಾಗೂ ತಂಡದ ಮಾಜಿ ನಾಯಕ ಇದೀಗ ತಂಡವನ್ನು ಸೇರಿಕೊಂಡಿದ್ದಾರೆ.

ವರದಿಯ ಪ್ರಕಾರ, ಈಡನ್ ಗಾರ್ಡನ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಮೊದಲ ಐಪಿಎಲ್ ಪಂದ್ಯದ ನಂತರ ಇಂಜುರಿಗೊಂಡು ತಂಡದಿಂದ ಹೊರಬಿದ್ದಿದ್ದ ತಂಡದ ಉಪನಾಯಕ ನಿತೀಶ್ ರಾಣಾ ಕೋಲ್ಕತ್ತಾದಲ್ಲಿ ಶಿಬಿರವನ್ನು ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಪರ ಆಡಿದ್ದ ರಾಣಾ 11 ಎಸೆತಗಳಲ್ಲಿ 9 ರನ್ ಗಳಿಸಿದ್ದರು. ಆ ನಂತರ ಫೀಲ್ಡಿಂಗ್ ಮಾಡುವಾಗ ಅವರ ಕೈಗೆ ಗಾಯವಾಗಿತ್ತು. ರಾಣಾ ಅವರ ಬೆರಳು ಮುರಿತವಾಗಿತ್ತು. ಹೀಗಾಗಿ ರಾಣಾ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯಗಳನ್ನು ಆಡಲಿಲ್ಲ.

ಕಳೆದ ಸೀಸನ್‌ನಲ್ಲಿ ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ರಾಣಾ ಕೋಲ್ಕತ್ತಾ ತಂಡದ ನಾಯಕರಾಗಿದ್ದರು. ಐಪಿಎಲ್‌ನಲ್ಲಿ ರಾಣಾ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ ಅವರು ಇದುವರೆಗೆ ಆಡಿರುವ 106 ಪಂದ್ಯಗಳಲ್ಲಿ 2603 ರನ್ ಗಳಿಸಿದ್ದಾರೆ.

ರಾಣಾ ಲೀಗ್‌ನಲ್ಲಿ ಇದುವರೆಗೆ 18 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು ಕಳೆದ ಸೀಸನ್‌ನಲ್ಲಿ ರಾಣಾ 14 ಪಂದ್ಯಗಳನ್ನು ಆಡಿ 3 ಅರ್ಧ ಶತಕ ಸಹಿತ 413 ರನ್ ಬಾರಿಸಿದ್ದರು. ಆದರೆ ರಾಣಾ ಪ್ರವೇಶ ಕೆಕೆಆರ್‌ಗೆ ದೊಡ್ಡ ತಲೆನೋವು ತಂದಿದೆ.

ಏಕೆಂದರೆ ಕೆಕೆಆರ್ ಬ್ಯಾಟಿಂಗ್ ವಿಭಾಗ ಪೂರ್ಣ ಪ್ರಮಾಣದಲ್ಲಿ ಭರ್ತಿಗೊಂಡಿದೆ. ತಂಡದಲ್ಲಿ ಆಡುತ್ತಿರುವವರೆಲ್ಲ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ರಾಣಾರನ್ನು ಪ್ಲೇಯಿಂಗ್ 11ನಲ್ಲಿ ಆಡಿಸುವುದು ಕೆಕೆಆರ್ ಮ್ಯಾನೇಜ್ಮೆಂಟ್ಗೆ ದೊಡ್ಡ ಪ್ರಶ್ನೆಯಾಗಿದೆ.