
ಲಕ್ನೋದಲ್ಲಿ ನಡೆದ ಆಸ್ಟ್ರೇಲಿಯಾ ಎ ವಿರುದ್ಧದ 2 ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯನ್ನು ಭಾರತ ಎ ತಂಡ 1-0 ಅಂತರದಿಂದ ಗೆದ್ದುಕೊಂಡಿದೆ. ಆಸ್ಟ್ರೇಲಿಯಾ ಎ ನೀಡಿದ 412 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಎ ಪರ ಕನ್ನಡಿಗ ಕೆಎಲ್ ರಾಹುಲ್ ಗೆಲುವಿನ ಶತಕ ಬಾರಿಸಿ ತಂಡವನ್ನು ಗೆಲ್ಲಿಸಿದ ಬಳಿಕವಷ್ಟೇ ಅಜೇಯರಾಗಿ ಡಗೌಟ್ ಸೇರಿಕೊಂಡರು.

ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 11 ರನ್‌ಗಳಿಗೆ ಸುಸ್ತಾಗಿದ್ದ ರಾಹುಲ್, ಎರಡನೇ ಇನ್ನಿಂಗ್ಸ್‌ನಲ್ಲಿ ಸುಡುವ ಜ್ವರದ ನಡುವೆಯೂ ಅಜೇಯ 176 ರನ್ ಬಾರಿಸಿದರು. ತಮ್ಮ ಇನ್ನಿಂಗ್ಸ್‌ನಲ್ಲಿ 210 ಎಸೆತಗಳನ್ನು ಎದುರಿಸಿದ ರಾಹುಲ್ 16 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 176 ರನ್ ಬಾರಿಸಿದರು.

ಕೇವಲ 138 ಎಸೆತಗಳಲ್ಲಿ 12 ಬೌಂಡರಿಗಳೊಂದಿಗೆ ತಮ್ಮ ಶತಕವನ್ನು ಪೂರೈಸಿದ ಕೆಎಲ್ ರಾಹುಲ್ ಇದು ಅವರ ಪ್ರಥಮ ದರ್ಜೆ ವೃತ್ತಿಜೀವನದ 22 ನೇ ಶತಕವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಮುಂಚಿತವಾಗಿ ರಾಹುಲ್ ಶತಕದ ಇನ್ನಿಂಗ್ಸ್ ಆಡಿರುವುದು ಟೀಂ ಇಂಡಿಯಾಕ್ಕೆ ಆನೆಬಲ ತಂದಿದೆ.

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ಆಸ್ಟ್ರೇಲಿಯಾ ಎ ಮೊದಲು ಬ್ಯಾಟ್ ಮಾಡಿ 420 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತ ಎ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 194 ರನ್‌ಗಳಿಗೆ ಆಲೌಟ್ ಆಯಿತು. ನಂತರ ಭಾರತ ಎ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಎ ತಂಡವನ್ನು 185 ರನ್‌ಗಳಿಗೆ ಸೀಮಿತಗೊಳಿಸಿ, ಗೆಲ್ಲಲು 412 ರನ್‌ಗಳ ಗುರಿಯನ್ನು ಪಡೆಯಿತು.

412 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಎ ತಂಡಕ್ಕೆ ಎನ್. ಜಗದೀಶನ್ ಮತ್ತು ಕೆ.ಎಲ್. ರಾಹುಲ್ ಉತ್ತಮ ಜೊತೆಯಾಟ ನೀಡಿದರು. ಮೊದಲ ವಿಕೆಟ್ಗೆ 85 ರನ್ ಸೇರಿಸಿದರು. ಆದರೆ ಇದೇ ವೇಳೆ ಆಘಾತವೆಂಬಂತೆ ತೀವ್ರ ಜ್ವರದಿಂದ ಬಳಲುತ್ತಿದ್ದ ಕೆ.ಎಲ್. ರಾಹುಲ್ ಬ್ಯಾಟಿಂಗ್ ಮಾಡಲು ಸಾಧ್ಯವಾಗದೆ, ಆಟವನ್ನೇ ಅರ್ಧಕ್ಕೆ ನಿಲ್ಲಿಸಿ ಪೆವಿಲಿಯನ್ ಸೇರಿಕೊಂಡಿದ್ದರು. ಆ ವೇಳೆಗೆ ರಾಹುಲ್ 92 ಎಸೆತಗಳಲ್ಲಿ 74 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು.

ನಾಲ್ಕನೇ ದಿನದಂದು ತಂಡಕ್ಕೆ ತನ್ನ ಅಗತ್ಯವನ್ನು ಅರಿತುಕೊಂಡ ಕೆ.ಎಲ್. ರಾಹುಲ್ ಅನಾರೋಗ್ಯದ ನಡುವೆಯೂ ಮೈದಾನಕ್ಕಿಳಿದು ತಮ್ಮ ಇನ್ನಿಂಗ್ಸ್ ಅನ್ನು ಮುಂದುವರಿಸಿದರು. ತಾಳ್ಮೆಯ ಇನ್ನಿಂಗ್ಸ್ ಕಟ್ಟುವುದರ ಜೊತೆಗೆ ಸಾಯಿ ಸುದರ್ಶನ್ ಜೊತೆ ಶತಕದ ಜೊತೆಯಾಟ ಕಟ್ಟಿ ಆಸ್ಟ್ರೇಲಿಯಾ ಎ ವಿರುದ್ಧ ಭಾರತ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.