
ಐಪಿಎಲ್ ಸೀಸನ್ 15ನಲ್ಲಿ ಕೆಎಲ್ ರಾಹುಲ್ ಮತ್ತೊಂದು ಭರ್ಜರಿ ಶತಕ ಸಿಡಿಸಿದ್ದಾರೆ. ಈ ಎರಡೂ ಶತಕಗಳನ್ನು ಮುಂಬೈ ಇಂಡಿಯನ್ಸ್ ವಿರುದ್ದವೇ ಬಾರಿಸಿರುವುದು ವಿಶೇಷ. ಅಂದರೆ ಐಪಿಎಲ್ನ 26ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಕೆಎಲ್ ರಾಹುಲ್ 60 ಎಸೆತಗಳಲ್ಲಿ ಅಜೇಯ 103 ರನ್ ಬಾರಿಸಿ ಮಿಂಚಿದ್ದರು.

ಇದೀಗ ಐಪಿಎಲ್ನ 37ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದವೇ 62 ಎಸೆತಗಳಲ್ಲಿ ಅಜೇಯ 103 ರನ್ ಬಾರಿಸಿದ್ದಾರೆ. ಈ ಮೂಲಕ ತಮ್ಮ ಐಪಿಎಲ್ ಶತಕದ ಸಂಖ್ಯೆಯನ್ನು 4 ಕ್ಕೇರಿಸಿದ್ದಾರೆ. ಸದ್ಯ ಐಪಿಎಲ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಭಾರತೀಯ ಆಟಗಾರನ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ ಇದುವರೆಗೆ 5 ಶತಕ ಬಾರಿಸಿದ್ದಾರೆ.

ಮತ್ತೊಂದೆಡೆ ರೋಹಿತ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ. ಹಿಟ್ಮ್ಯಾನ್ ಐಪಿಎಲ್ನಲ್ಲಿ 2 ಶತಕ ಬಾರಿಸಿದರೆ, ಟೀಮ್ ಇಂಡಿಯಾ ಪರ 5 ಶತಕ ಸಿಡಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 6 ಶತಕ ಬಾರಿಸಿದ ಏಕೈಕ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು.

ಇದೀಗ ಕೆಎಲ್ ರಾಹುಲ್ ಐಪಿಎಲ್ನಲ್ಲಿ ಟೀಮ್ ಇಂಡಿಯಾ ಪರ 2 ಶತಕ ಹಾಗೂ ಐಪಿಎಲ್ನಲ್ಲಿ 4 ಸೆಂಚುರಿ ಬಾರಿಸುವ ಮೂಲಕ 6 ಶತಕಗಳನ್ನು ಪೂರೈಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಹಿಟ್ಮ್ಯಾನ್ ಹೆಸರಿನಲ್ಲಿದ್ದ ದಾಖಲೆಯನ್ನು ಕೆಎಲ್ ರಾಹುಲ್ ಸರಿಗಟ್ಟಿದ್ದಾರೆ.

ಇನ್ನು ಐಪಿಎಲ್ನಲ್ಲಿ ಒಂದು ಶತಕ ಮೂಡಿಬಂದರೆ ವಿರಾಟ್ ಕೊಹ್ಲಿಯ (5 ಶತಕ) ಶತಕದ ದಾಖಲೆಯನ್ನೂ ಕೂಡ ಕೆಎಲ್ ರಾಹುಲ್ ಸರಿಗಟ್ಟಲ್ಲಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.

KL Rahul