
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಾರಾಜ ಟಿ20 ಟ್ರೋಫಿಯ ಲೀಗ್ ಹಂತ ಮುಕ್ತಾಯವಾಗಿದೆ. ಆಗಸ್ಟ್ 11 ರಿಂದ ಆರಂಭವಾಗಿದ್ದ ಈ ಟೂರ್ನಿಯ ಲೀಗ್ ಹಂತ ಇಂದು ಅಂದರೆ ಆಗಸ್ಟ್ 25 ರಂದು ಅಂತ್ಯಗೊಂಡಿದೆ. ಇದರೊಂದಿಗೆ ನಾಲ್ಕು ತಂಡಗಳು ಪ್ಲೇಆಫ್ಗೆ ಅರ್ಹತೆ ಪಡೆದರೆ, ಉಳಿದೆರಡು ತಂಡಗಳು ಲೀಗ್ನಿಂದ ಹೊರಬಿದ್ದಿವೆ. ಇದರಲ್ಲಿ ಹಾಲಿ ಚಾಂಪಿಯನ್ ಮೈಸೂರು ಕೂಡ ಒಂದಾಗಿದೆ.

ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹುಬ್ಬಳ್ಳಿ ಟೈಗರ್ಸ್ ತಂಡ ಆಡಿದ 10 ಪಂದ್ಯಗಳಲ್ಲಿ 7 ರಲ್ಲಿ ಗೆದ್ದು ಮೂರು ಪಂದ್ಯಗಳಲ್ಲಿ ಸೋತು 14 ಅಂಕಗಳೊಂದಿಗೆ ಪ್ಲೇ ಆಫ್ಗೆ ಅರ್ಹತೆ ಪಡೆದುಕೊಂಡಿದೆ.

ಎರಡನೇ ಸ್ಥಾನದಲ್ಲಿರುವ ಮಂಗಳೂರು ಡ್ರಾಗನ್ಸ್ ತಂಡ ಲೀಗ್ ಹಂತದ ಕೊನೆಯ ಪಂದ್ಯವನ್ನಾಡುತ್ತಿದ್ದು, ಈ ಪಂದ್ಯವನ್ನು ಸೋತರೂ ಪ್ಲೇ ಆಫ್ಗೇರಲಿದೆ. ಪ್ರಸ್ತುತ ತಂಡ ಆಡಿದ 9 ಪಂದ್ಯಗಳಲ್ಲಿ 6 ರಲ್ಲಿ ಗೆದ್ದು, 2 ರಲ್ಲಿ ಸೋತಿದ್ದು, 13 ಅಂಕ ಪಡೆದುಕೊಂಡಿದೆ.

ಮೂರನೇ ಸ್ಥಾನದಲ್ಲಿರುವ ಗುಲ್ಬರ್ಗಾ ಮಿಸ್ಟಿಕ್ಸ್ ಕೂಡ ಲೀಗ್ ಹಂತದ ಕೊನೆಯ ಪಂದ್ಯವನ್ನಾಡುತ್ತಿದ್ದು, ಈ ಪಂದ್ಯವನ್ನು ಸೋತರೂ ಪ್ಲೇ ಆಫ್ಗೇರಲಿದೆ. ಪ್ರಸ್ತುತ ತಂಡ ಆಡಿದ 9 ಪಂದ್ಯಗಳಲ್ಲಿ 6 ರಲ್ಲಿ ಗೆದ್ದು, 3 ರಲ್ಲಿ ಸೋತಿದ್ದು, 12 ಅಂಕ ಪಡೆದುಕೊಂಡಿದೆ.

ನಾಲ್ಕನೇ ಹಾಗೂ ಕೊನೆಯ ತಂಡವಾಗಿ ಪ್ಲೇಆಫ್ಗೇರಿರುವ ಬೆಂಗಳೂರು ಬ್ಲಾಸ್ಟರ್ಸ್ ತಂಡ ಆಡಿದ 10 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದಿದ್ದು, ಉಳಿದ 5 ಪಂದ್ಯಗಳಲ್ಲಿ ಸೋಲುಕಂಡಿದೆ. ಇದರೊಂದಿಗೆ 10 ಅಂಕ ಪಡೆದುಕೊಂಡಿದೆ.

ಕಳೆದ ಬಾರಿಯ ಚಾಂಪಿಯನ್ ಮೈಸೂರು ವಾರಿಯರ್ಸ್ ಮೇಲೆ ಈ ಬಾರಿ ಸಾಕಷ್ಟು ನಿರೀಕ್ಷೆಗಳಿದ್ದವು. ಅದರಂತೆ ತಂಡದಲ್ಲಿ ಸಾಕಷ್ಟು ಬಲಿಷ್ಠ ಆಟಗಾರರಿದ್ದರು. ಆದಾಗ್ಯೂ ಕರುಣ್ ನಾಯರ್ ಅನುಪಸ್ಥಿತಿಯಲ್ಲಿ ಮೈಸೂರು ತಂಡಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆಡಿದ 10 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನು ಗೆದ್ದು 6 ಅಂಕ ಕಲೆಹಾಕಿತು.

ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಶಿವಮೊಗ್ಗ ಲಯನ್ಸ್ ತಂಡವು ಕಳೆದ ಬಾರಿಯಂತೆ ಈ ಬಾರಿಯೂ ಕಳಪೆ ಪ್ರದರ್ಶನ ನೀಡಿದ್ದು, ಆಡಿದ 10 ಪಂದ್ಯಗಳಲ್ಲಿ ಕೇವಲ 1 ಪಂದ್ಯವನ್ನು ಗೆದ್ದು, ಉಳಿದ 8 ಪಂದ್ಯಗಳಲ್ಲಿ ಹೀನಾಯವಾಗಿ ಸೋತಿತು. ಏಕೈಕ ಪಂದ್ಯ ಮಾತ್ರ ಮಳೆಯಿಂದ ರದ್ದಾಗಿತ್ತು.