Maharaja Trophy 2024: ಮಹಾರಾಜ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ 3 ತಂಡಗಳು
Maharaja Trophy Winners List: ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸುತ್ತಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಮೂರನೇ ಚಾಂಪಿಯನ್ ಆಗಿ ಮೈಸೂರು ವಾರಿಯರ್ಸ್ ತಂಡ ಹೊರಹೊಮ್ಮಿದೆ. ಇದಕ್ಕೂ ಮುನ್ನ ಮಹಾರಾಜ ಟ್ರೋಫಿಯನ್ನು ಎತ್ತಿ ಹಿಡಿದ ತಂಡಗಳ ಸಂಪೂರ್ಣ ಮಾಹಿತಿ ಇಲ್ಲಿದೆ...
1 / 6
ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಮೂರನೇ ಸೀಸನ್ ಮುಕ್ತಾಯಗೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಮಣಿಸಿ ಮೈಸೂರು ವಾರಿಯರ್ಸ್ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡಿದ್ದರು.
2 / 6
ಅದರಂತೆ ಇನಿಂಗ್ಸ್ ಆರಂಭಿಸಿದ ಮೈಸೂರು ವಾರಿಯರ್ಸ್ ಪರ ಆರಂಭಿಕ ಆಟಗಾರ ಎಸ್ಯು ಕಾರ್ತಿಕ್ 44 ಎಸೆತಗಳಲ್ಲಿ 71 ರನ್ ಸಿಡಿಸಿದರೆ, ನಾಯಕ ಕರುಣ್ ನಾಯರ್ 45 ಎಸೆತಗಳಲ್ಲಿ 66 ರನ್ ಬಾರಿಸಿದರು. ಇನ್ನು ಮನೋಜ್ ಭಾಂಡಗೆ 13 ಎಸೆತಗಳಲ್ಲಿ 44 ರನ್ ಚಚ್ಚಿದ್ದರು. ಈ ಮೂಲಕ ಮೈಸೂರು ವಾರಿಯರ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 207 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಬೆಂಗಳೂರು ಬ್ಲಾಸ್ಟರ್ಸ್ ತಂಡವು 20 ಓವರ್ಗಳಲ್ಲಿ 168 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಮೈಸೂರು ವಾರಿಯರ್ಸ್ ತಂಡವು 45 ರನ್ಗಳ ಜಯ ಸಾಧಿಸಿದೆ.
3 / 6
ವಿಶೇಷ ಎಂದರೆ ಮಹಾರಾಜ ಟ್ರೋಫಿ ಟೂರ್ನಿಯ ಮೂರು ಸೀಸನ್ಗಳಲ್ಲೂ ಮೂರು ತಂಡಗಳು ಚಾಂಪಿಯನ್ ಪಟ್ಟಕ್ಕೇರಿದೆ. ಆ ತಂಡಗಳಾವುವು? ಫೈನಲ್ನಲ್ಲಿ ಗೆದ್ದ ತಂಡ ಯಾವುದು? ಸೋತವರು ಯಾರು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...
4 / 6
ಗುಲ್ಬರ್ಗ ಮಿಸ್ಟಿಕ್ಸ್ ಚಾಂಪಿಯನ್ಸ್: 2022ರಲ್ಲಿ ನಡೆದ ಚೊಚ್ಚಲ ಮಹಾರಾಜ ಟ್ರೋಫಿ ಫೈನಲ್ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಲ್ಬರ್ಗ ಮಿಸ್ಟಿಕ್ಸ್ ತಂಡವು 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 220 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಬೆಂಗಳೂರು ಬ್ಲಾಸ್ಟರ್ಸ್ 209 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಮನೀಶ್ ಪಾಂಡೆ ನಾಯಕತ್ವದ ಗುಲ್ಬರ್ಗ ಮಿಸ್ಟಿಕ್ಸ್ ತಂಡವು ಚೊಚ್ಚಲ ಮಹಾರಾಜ ಟ್ರೋಫಿಯನ್ನು ಎತ್ತಿ ಹಿಡಿದಿತ್ತು.
5 / 6
ಹುಬ್ಬಳ್ಳಿ ಟೈಗರ್ಸ್ ಚಾಂಪಿಯನ್ಸ್; 2023ರ ಮಹಾರಾಜ ಟ್ರೋಫಿ ಫೈನಲ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 203 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮೈಸೂರು ವಾರಿಯರ್ಸ್ 20 ಓವರ್ಗಳಲ್ಲಿ 195 ರನ್ಗಳಿಸಿ 8 ರನ್ಗಳಿಂದ ಸೋಲೊಪ್ಪಿಕೊಂಡಿತು. ವಿಶೇಷ ಎಂದರೆ 2023 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮನೀಶ್ ಪಾಂಡೆ ಮುನ್ನಡೆಸಿದ್ದರು.
6 / 6
ಮೈಸೂರು ವಾರಿಯರ್ಸ್ ಚಾಂಪಿಯನ್ಸ್: 2024ರ ಮಹಾರಾಜ ಟ್ರೋಫಿ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಸೋಲಿಸಿ ಮೈಸೂರು ವಾರಿಯರ್ಸ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದೆ. ಈ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ 207 ರನ್ ಕಲೆಹಾಕಿದರೆ, ಬೆಂಗಳೂರು ಬ್ಲಾಸ್ಟರ್ಸ್ 162 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಮೈಸೂರು ವಾರಿಯರ್ಸ್ 45 ರನ್ಗಳ ಜಯ ಸಾಧಿಸಿ ಮಹಾರಾಜ ಟ್ರೋಫಿಯ ಮಹಾರಾಜ ಎನಿಸಿಕೊಂಡಿದೆ.