ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (MCA) ಆಯೋಜಿಸುತ್ತಿರುವ ಹೊಸ ಟೂರ್ನಿಗೆ ಮಹಾರಾಷ್ಟ್ರ ಪ್ರೀಮಿಯರ್ ಲೀಗ್ ಎಂದು ಹೆಸರಿಡಲಾಗಿದೆ. ಈ ಲೀಗ್ನಲ್ಲಿ ಒಟ್ಟು 6 ನಗರಗಳನ್ನು ಪ್ರತಿನಿಧಿಸುವ ಆರು ತಂಡಗಳನ್ನು ಘೋಷಿಸಲಾಗಿದೆ.
ಅದರಂತೆ ಪುಣೆ, ಕೊಲ್ಲಾಪುರ, ನಾಸಿಕ್, ಸಂಭಾಜಿನಗರ್, ರತ್ನಗಿರಿ ಹಾಗೂ ಸೋಲಾಪುರ್ ತಂಡಗಳು ಮಹಾರಾಷ್ಟ್ರ ಪ್ರೀಮಿಯರ್ ಲೀಗ್ನಲ್ಲಿ ಕಣಕ್ಕಿಳಿಯಲಿದೆ.
ಈ ಆರು ತಂಡಗಳಿಗೆ ಐಕಾನ್ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಸಿಎಸ್ಕೆ ತಂಡದ ಸ್ಟಾರ್ ಆಟಗಾರ ರುತುರಾಜ್ ಗಾಯಕ್ವಾಡ್ ಪುಣೆ ತಂಡವನ್ನು ಮುನ್ನಡೆಸಲಿದ್ದಾರೆ.
ಹಾಗೆಯೇ ನಾಸಿಕ್ ತಂಡದಲ್ಲಿ ಐಕಾನ್ ಆಟಗಾರನಾಗಿ ಸನ್ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆಟಗಾರ ರಾಹುಲ್ ತ್ರಿಪಾಠಿ ಕಾಣಿಸಿಕೊಂಡಿದ್ದಾರೆ.
ಇನ್ನು ರತ್ನಗಿರಿ ತಂಡದ ಐಕಾನ್ ಪ್ಲೇಯರ್ ಆಗಿ ಮಹಾರಾಷ್ಟ್ರದ ಅನುಭವಿ ಆಟಗಾರ ಅಝಿಂ ಖಾಝಿ ಆಯ್ಕೆಯಾಗಿದ್ದಾರೆ.
ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ವಿಕ್ಕಿ ಒಸ್ತ್ವಾಲ್ ಸೋಲಾಪುರ್ ತಂಡದ ಐಕಾನ್ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ.
ಹಾಗೆಯೇ ಆರ್ಸಿಬಿ ತಂಡದ ಹಿರಿಯ ಆಟಗಾರ ಕೇದಾರ್ ಜಾಧವ್ ಅವರನ್ನು ಕೊಲ್ಲಾಪುರ ತಂಡದ ಐಕಾನ್ ಪ್ಲೇಯರ್ ಆಗಿ ಆಯ್ಕೆ ಮಾಡಲಾಗಿದೆ.
ಈ ಟೂರ್ನಿಯು ಜೂನ್ 15 ರಂದು ಪ್ರಾರಂಭವಾಗಲಿದ್ದು, ಎಲ್ಲಾ ಪಂದ್ಯಗಳು ಪುಣೆಯ ಹೊರವಲಯದಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯಲಿವೆ.