Updated on: Jun 05, 2023 | 8:29 PM
WTC Final 2023: ಟೀಮ್ ಇಂಡಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡವು ಭರ್ಜರಿ ತಯಾರಿಯಲ್ಲಿದ್ದಾರೆ. ಈ ತಯಾರಿ ನಡುವೆ ವಿರಾಟ್ ಕೊಹ್ಲಿಗಾಗಿ ವಿಶೇಷ ರಣತಂತ್ರಗಳನ್ನು ಕೂಡ ಹೆಣೆಯುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕಿಂಗ್ ಕೊಹ್ಲಿಯ ಕಂಬ್ಯಾಕ್.
ಹೌದು, 2019 ರಿಂದ 2021 ರವರೆಗೆ ಮರೆಯಾಗಿದ್ದ ಕಿಂಗ್ ಕೊಹ್ಲಿಯ ಫಾರ್ಮ್ ಇದೀಗ ಮತ್ತೆ ಬಂದಿದೆ. ಇದುವೇ ಈಗ ಆಸ್ಟ್ರೇಲಿಯಾ ತಂಡವನ್ನು ಚಿಂತೆಗೀಡು ಮಾಡಿದೆ. ಏಕೆಂದರೆ ಕಳೆದ ಒಂದು ವರ್ಷದಲ್ಲಿ ವಿರಾಟ್ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.
ಅಂದರೆ ವಿರಾಟ್ ಕೊಹ್ಲಿ 2022ರ ಏಷ್ಯಾಕಪ್ ಮೂಲಕ ಫಾರ್ಮ್ ಕಂಡುಕೊಂಡಿದ್ದರು. ಅದರಲ್ಲೂ ಅಫ್ಘಾನಿಸ್ತಾನ್ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿ ಶತಕದ ಬರವನ್ನು ನೀಗಿಸಿದ್ದರು. ಇದಾದ ಬಳಿಕ ಕಿಂಗ್ ಕೊಹ್ಲಿ ಹಿಂತಿರುಗಿ ನೋಡಿಲ್ಲ ಎನ್ನಬಹುದು.
ಏಕೆಂದರೆ ಏಷ್ಯಾಕಪ್ನಲ್ಲಿ ಫಾರ್ಮ್ ಕಂಡುಕೊಂಡ ಬಳಿಕ ವಿರಾಟ್ ಕೊಹ್ಲಿ ಒಟ್ಟು 48 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 52 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಕೊಹ್ಲಿ ಕಲೆಹಾಕಿರುವುದು ಬರೋಬ್ಬರಿ 2235 ರನ್ಗಳು. ಅಂದರೆ ಕೊಹ್ಲಿ ಪ್ರತಿ ಪಂದ್ಯಗಳಲ್ಲಿ 53.21 ಸರಾಸರಿಯಲ್ಲಿ ರನ್ ಪೇರಿಸಿದ್ದಾರೆ.
ಇದರ ನಡುವೆ 7 ಭರ್ಜರಿ ಶತಕಗಳನ್ನು ಬಾರಿಸಿದರೆ, 14 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅಂದರೆ 2019 ರಿಂದ 2022 ರವರೆಗೆ 3 ವರ್ಷ ಶತಕದ ಬರ ಎದುರಿಸಿದ್ದ ಕೊಹ್ಲಿ ಒಂದೇ ವರ್ಷದೊಳಗೆ ಒಟ್ಟು 7 ಸೆಂಚುರಿಗಳನ್ನು ಸಿಡಿಸಿ ಅಬ್ಬರಿಸಿರುವುದು ವಿಶೇಷ.
ಅದರಲ್ಲೂ ಈ ಒಂದು ವರ್ಷದೊಳಗೆ ವಿರಾಟ್ ಕೊಹ್ಲಿ ಅತೀ ಹೆಚ್ಚು ಸ್ಕೋರ್ಗಳಿಸಿದ್ದು ಆಸ್ಟ್ರೇಲಿಯಾ ವಿರುದ್ಧ ಎಂಬುದು ವಿಶೇಷ. ಈ ವರ್ಷ ಮಾರ್ಚ್ನಲ್ಲಿ ಅಹಮದಾಬಾದ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ನಲ್ಲಿ ಕಿಂಗ್ ಕೊಹ್ಲಿ ಶತಕ ಬಾರಿಸಿ ವಿರಾಟ ದರ್ಶನ ತೋರಿಸಿದ್ದರು.
ಅಂದು ಆಸ್ಟ್ರೇಲಿಯಾ ಬೌಲರ್ಗಳನ್ನು ಚೆಂಡಾಡಿದ್ದ ಕೊಹ್ಲಿ ಮೊದಲ ಇನಿಂಗ್ಸ್ನಲ್ಲಿ 186 ರನ್ ಬಾರಿಸಿ ಅಬ್ಬರಿಸಿದ್ದರು. ಈ ಅಬ್ಬರವನ್ನು ನೋಡಿ ಆಸೀಸ್ ಬೌಲರ್ಗಳೇ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗಾಗಿ ಸಜ್ಜಾಗುತ್ತಿದ್ದಾರೆ.
ಅಂದರೆ ಕಿಂಗ್ ಕೊಹ್ಲಿಯ ಅದ್ಭುತ ಫಾರ್ಮ್ ಆಸ್ಟ್ರೇಲಿಯಾ ಪಾಲಿಗೆ ಕಂಟಕವಾಗುವುದರಲ್ಲಿ ಅನುಮಾನವೇ ಇಲ್ಲ. ಅದರಲ್ಲೂ ನಿರ್ಣಾಯಕ ಪಂದ್ಯದಲ್ಲಿ ಅತ್ಯದ್ಭುತ ಇನಿಂಗ್ಸ್ ಆಡುವ ವಿರಾಟ್ ಕೊಹ್ಲಿಯನ್ನು ಕಟ್ಟಿಹಾಕಲು ಆಸ್ಟ್ರೇಲಿಯಾ ಬೌಲರ್ಗಳು ವಿಶೇಷ ರಣತಂತ್ರಗಳನ್ನು ರೂಪಿಸುತ್ತಿದ್ದಾರೆ. ಈ ತಂತ್ರಗಳಿಗೆ ಕಿಂಗ್ ಕೊಹ್ಲಿಯ ಪ್ರತಿತಂತ್ರ ಹೇಗಿರಲಿದೆ ಎಂಬುದು ಜೂನ್ 7 ರಿಂದ ಗೊತ್ತಾಗಲಿದೆ.