
ಕನ್ನಡಿಗ ಮಯಾಂಕ್ ಅಗರ್ವಾಲ್ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡು ವರ್ಷಗಳೇ ಕಳೆದಿವೆ. ಇತ್ತ ದೇಶೀ ಟೂರ್ನಿಯಲ್ಲೂ ಮಯಾಂಕ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಹಾಗೆಯೇ ಐಪಿಎಲ್ನಲ್ಲಿಯೂ ಆರ್ಸಿಬಿ ತಂಡದ ಪರ ಬದಲಿ ಆಟಗಾರನಾಗಿ ಆಡಿದ್ದ ಮಯಾಂಕ್ ನಿರಾಸೆ ಮೂಡಿಸಿದ್ದರು. ಹೀಗಾಗಿ ಭಾರತ ಕ್ರಿಕೆಟ್‌ನಲ್ಲಿ ಮಯಾಂಕ್ ಅವರದ್ದು ಮುಗಿದ ಅಧ್ಯಾಯ ಎನ್ನಬಹುದು.

ಹೀಗಾಗಿ ತಮ್ಮ ವೃತ್ತಿಜೀವನವನ್ನು ಮತ್ತೆ ಕಟ್ಟಲು ಮುಂದಾಗಿರುವ ಮಯಾಂಕ್ ಇದೀಗ ವಿದೇಶಿ ಲೀಗ್ ಆಡಲು ಮುಂದಾಗಿದ್ದಾರೆ. ಕಳೆದ 3 ವರ್ಷಗಳಿಂದ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡದ ಮಯಾಂಕ್ ಇದೀಗ ಇಂಗ್ಲೆಂಡ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಯಾರ್ಕ್‌ಷೈರ್ ತಂಡದೊಂದಿಗೆ ಅಲ್ಪಾವಧಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಇದು ಮಯಾಂಕ್ ಅವರ ವೃತ್ತಿಜೀವನದ ಮೊದಲ ಕೌಂಟಿ ಅನುಭವವಾಗಿದೆ. ಸೆಪ್ಟೆಂಬರ್ 8 ರಂದು ಪ್ರಾರಂಭವಾಗುವ ಸೋಮರ್‌ಸೆಟ್ ವಿರುದ್ಧದ ಯಾರ್ಕ್‌ಷೈರ್ ಪಂದ್ಯಕ್ಕೂ ಮೊದಲು ಮಯಾಂಕ್ ತಂಡವನ್ನು ಸೇರಿಕೊಳ್ಳಲಿದ್ದು ಮೂರು ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ. ಇದರ ನಂತರ, ಅವರು 2025-26 ರ ರಣಜಿ ಟ್ರೋಫಿಗಾಗಿ ಭಾರತಕ್ಕೆ ಹಿಂತಿರುಗಲಿದ್ದಾರೆ.

ಮಯಾಂಕ್ 2021-22 ರಲ್ಲಿ ಭಾರತೀಯ ಟೆಸ್ಟ್ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸಕ್ಕೆ ಹೋಗಿದ್ದರು. ಆದರೆ ತಲೆಗೆ ಗಾಯ ಮಾಡಿಕೊಂಡ ಪರಿಣಾಮದಿಂದಾಗಿ ಆ ಸರಣಿಯಲ್ಲಿ ಆಡಲು ಸಾಧ್ಯವಾಗಲಿಲ್ಲ. ಇದಲ್ಲದೆ, ಅವರು ಜೂನ್ 2023 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿಯೂ ಇಂಗ್ಲೆಂಡ್‌ಗೆ ಹೋಗಿದ್ದರು. ಇದು ಮಾತ್ರವಲ್ಲದೆ ಮಯಾಂಕ್ ಭಾರತ ಎ ಜೊತೆ ಎರಡು ಬಾರಿ ಇಂಗ್ಲೆಂಡ್ ಪ್ರವಾಸ ಮಾಡಿದ್ದಾರೆ.

ಈ ವರ್ಷದ ಕೌಂಟಿ ಸೀಸನ್ನಲ್ಲಿ ಅನೇಕ ಆಟಗಾರರು ಆಡುತ್ತಿದ್ದಾರೆ. ಇದರಲ್ಲಿ ಮಯಾಂಕ್ ಅವರಲ್ಲದೆ, ಖಲೀಲ್ ಅಹ್ಮದ್ (ಎಸೆಕ್ಸ್), ತಿಲಕ್ ವರ್ಮಾ (ಹ್ಯಾಂಪ್‌ಶೈರ್), ಯುಜ್ವೇಂದ್ರ ಚಾಹಲ್ (ನಾರ್ಥಾಂಪ್ಟನ್‌ಶೈರ್), ಇಶಾನ್ ಕಿಶನ್ (ನಾಟಿಂಗ್‌ಹ್ಯಾಮ್‌ಶೈರ್) ಮತ್ತು ಸಾಯಿ ಕಿಶೋರ್ (ಸರ್ರೆ) ಕೂಡ ಇಂಗ್ಲೆಂಡ್‌ನ ವಿವಿಧ ಕೌಂಟಿ ತಂಡಗಳಿಗಾಗಿ ಆಡುತ್ತಿದ್ದಾರೆ. ಇವರಲ್ಲದೆ, ಜಯದೇವ್ ಉನಾದ್ಕಟ್ ಕೂಡ ಈ ತಿಂಗಳು ಸಸೆಕ್ಸ್ ತಂಡವನ್ನು ಸೇರಲಿದ್ದಾರೆ.

ಕರ್ನಾಟಕ ತಂಡದ ಎಲ್ಲಾ ಸ್ವರೂಪಗಳ ನಾಯಕನಾಗಿರುವ ಮಯಾಂಕ್ ಅಗರ್ವಾಲ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಆಡಿರುವ 190 ಇನ್ನಿಂಗ್ಸ್‌ಗಳಲ್ಲಿ 43.98 ಸರಾಸರಿಯಲ್ಲಿ 8050 ರನ್ ಗಳಿಸಿದ್ದಾರೆ, ಇದರಲ್ಲಿ 18 ಶತಕಗಳು ಮತ್ತು 44 ಅರ್ಧಶತಕಗಳು ಸೇರಿವೆ.

ಇದಲ್ಲದೆ ಟೀಂ ಇಂಡಿಯಾ ಪರ 21 ಟೆಸ್ಟ್ ಪಂದ್ಯಗಳನ್ನು ಆಡಿರುವ ಮಯಾಂಕ್ 41.33 ಸರಾಸರಿಯಲ್ಲಿ 1488 ರನ್ ಗಳಿಸಿದ್ದಾರೆ ಮತ್ತು ನಾಲ್ಕು ಶತಕಗಳನ್ನು ಸಹ ಬಾರಿಸಿದ್ದಾರೆ. ಅವರು ಮಾರ್ಚ್ 2023 ರಲ್ಲಿ ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಪರ ಕೊನೆಯ ಟೆಸ್ಟ್ ಆಡಿದ್ದರು.
Published On - 6:56 pm, Fri, 5 September 25