Sachin Dhas: ಸಚಿನ್… ಕಿರಿಯರ ವಿಶ್ವಕಪ್ನಲ್ಲಿ ಕಬಡ್ಡಿ ಆಟಗಾರನ ಪುತ್ರ ಮಿಂಚಿಂಗ್
TV9 Web | Updated By: ಝಾಹಿರ್ ಯೂಸುಫ್
Updated on:
Feb 06, 2024 | 2:02 PM
Sachin Dhas: ಅಂಡರ್ 19 ವಿಶ್ವಕಪ್ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಸಚಿನ್ ದಾಸ್ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ ನೇಪಾಳ ವಿರುದ್ಧ ಭರ್ಜರಿ ಶತಕ ಬಾರಿಸಿ ಮಿಂಚಿದ್ದರು. ಈ ಶತಕದ ಬೆನ್ನಲ್ಲೇ ಸಚಿನ್ ದಾಸ್ ಹೆಸರಿನ ಹಿಂದಿನ ಕಹಾನಿಗಳು ಬೆಳಕಿಗೆ ಬಂದಿವೆ.
1 / 6
ಜೆರ್ಸಿ ನಂಬರ್ 10...ಇದು ಭಾರತೀಯರ ಪಾಲಿಗೆ ಕೇವಲ ನಂಬರ್ ಅಲ್ಲ, ಬದಲಾಗಿ ಅದೊಂದು ಭಾವನೆ. ಹೌದು, ಕ್ರಿಕೆಟ್ ಇತಿಹಾಸ ಕಂಡ ಮಾಸ್ಟರ್ಪೀಸ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜೆರ್ಸಿ ನಂಬರ್-10. ಇದೇ ಸಂಖ್ಯೆಯಲ್ಲಿ ಅದೇ ಹೆಸರಿನಲ್ಲಿ ಆಟಗಾರನೊಬ್ಬ ಕಣಕ್ಕಿಳಿಯುತ್ತಿದ್ದಾನೆ. ಅದು ಕೂಟ ಕಿರಿಯರ ವಿಶ್ವಕಪ್ನಲ್ಲಿ ಎಂಬುದು ವಿಶೇಷ.
2 / 6
ಸಚಿನ್ ದಾಸ್ ಭಾರತ ಅಂಡರ್ 19 ತಂಡದ ಕೆಳ ಕ್ರಮಾಂಕದ ಬ್ಯಾಟರ್. ಆದರೆ ಈ ಬಾರಿಯ ವಿಶ್ವಕಪ್ನಲ್ಲಿ ಸಚಿನ್ಗೆ ಅವಕಾಶ ಸಿಕ್ಕಿದ್ದೇ ವಿರಳ. ಇದಕ್ಕೆ ಮುಖ್ಯ ಕಾರಣ ಮೇಲಿನ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿರುವ ಮುಶೀರ್ ಖಾನ್ ಹಾಗೂ ಉದಯ್ ಸಹರಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವುದು. ಇದಾಗ್ಯೂ ಅಂತಿಮ ಹಂತಗಳಲ್ಲಿ ಸಿಗುವ ಕೆಲ ಎಸೆತಗಳಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಸಚಿನ್ ದಾಸ್ ಯಶಸ್ವಿಯಾಗಿದ್ದಾರೆ.
3 / 6
ಇದೇ ಕಾರಣದಿಂದ ನೇಪಾಳ ವಿರುದ್ಧದ ಪಂದ್ಯದಲ್ಲಿ ಸಚಿನ್ ದಾಸ್ಗೆ ಮುಂಬಡ್ತಿ ನೀಡಲಾಗಿತ್ತು. ಹೀಗೆ ಸಿಕ್ಕ ಅವಕಾಶವನ್ನು ಯುವ ದಾಂಡಿಗ ಸಂಪೂರ್ಣವಾಗಿ ಬಳಸಿಕೊಂಡಿದ್ದರು ಎಂಬುದು ವಿಶೇಷ. ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಸಚಿನ್ 101 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ 11 ಫೋರ್ಗಳೊಂದಿಗೆ 116 ರನ್ ಬಾರಿಸಿ ಅಬ್ಬರಿಸಿದ್ದಾರೆ. ಇದರೊಂದಿಗೆ ನಂಬರ್ 10 ಜೆರ್ಸಿ ಧರಿಸುವ ಸಚಿನ್ ದಾಸ್ ಹೆಸರು ಮುನ್ನಲೆಗೆ ಬಂದಿದೆ.
4 / 6
ಮಹಾರಾಷ್ಟ್ರದ ಬಿರ್ ಜಿಲ್ಲೆಯವರಾದ ಸಚಿನ್ ದಾಸ್ ಅವರ ತಂದೆ ಸಂಜಯ್ ದಾಸ್ ಕಬಡ್ಡಿ ಆಟಗಾರ ಎಂಬುದು ವಿಶೇಷ. ಇದಾಗ್ಯೂ ಕ್ರಿಕೆಟ್ ಪ್ರೇಮಿ. ಅದರಲ್ಲೂ ಸಚಿನ್ ತೆಂಡೂಲ್ಕರ್ ಅವರ ಅಪ್ಪಟ ಅಭಿಮಾನಿ. ಹೀಗಾಗಿಯೇ ಮಗನಿಗೆ ಸಚಿನ್ ಅವರ ಹೆಸರನ್ನಿಟ್ಟಿದ್ದರು. ಅಂದು ನಾಮಕರಣ ಮಾಡಿದಾಗ ಮುಂದೊಂದು ದಿನ ಸಚಿನ್ ಹೆಸರಿನಲ್ಲಿಯೇ ತನ್ನ ಮಗ ಕೂಡ ನಂಬರ್-10 ಜೆರ್ಸಿಯಲ್ಲಿ ಭಾರತದ ಪರ ಕಣಕ್ಕಿಳಿಯುತ್ತಾರೆ ಎಂದು ಖುದ್ದು ಸಂಜಯ್ ದಾಸ್ ಕೂಡ ಊಹಿಸಿರಲಿಲ್ಲ. ಇದೀಗ ತಂದೆಯ ನೆಚ್ಚಿನ ಕ್ರಿಕೆಟಿಗನ ಹೆಸರಿನೊಂದಿಗೆ ಸಚಿನ್ ದಾಸ್ ಕೂಡ ಮಿಂಚುತ್ತಿದ್ದಾರೆ.
5 / 6
ಇದಕ್ಕೂ ಮುನ್ನ ಸಚಿನ್ ದಾಸ್ 2023 ರಲ್ಲಿ ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನಲ್ಲಿ ಕೊಲ್ಹಾಪುರ್ ಟಸ್ಕರ್ಸ್ ಪರ ಕಣಕ್ಕಿಳಿದಿದ್ದರು. ಈ ಲೀಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಮಿಂಚಿದ್ದ ಸಚಿನ್ ಅಂಡರ್-19 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
6 / 6
ಇದೀಗ ಟೀಮ್ ಇಂಡಿಯಾ ಅಂಡರ್-19 ವಿಶ್ವಕಪ್ನಲ್ಲಿ ಸೆಮಿಫೈನಲ್ಗೆ ಪ್ರವೇಶಿಸಿದೆ. ಅತ್ತ ನಾಕೌಟ್ ಹಂತದ ಪಂದ್ಯದಲ್ಲೂ ಸಚಿನ್ ದಾಸ್ ಕಣಕ್ಕಿಳಿದಿದ್ದಾರೆ. ಈ ಮ್ಯಾಚ್ನಲ್ಲೂ ಮಿಂಚುವ ಮೂಲಕ ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿ ತಂದೆಯ ಕನಸನ್ನು ಈಡೇರಿಸುವ ವಿಶ್ವಾಸದಲ್ಲಿದ್ದಾರೆ 19 ವರ್ಷದ ಸಚಿನ್ ದಾಸ್.