Updated on: Feb 26, 2023 | 10:30 PM
ಕೇಪ್ಟೌನ್ನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಸೌತ್ ಆಫ್ರಿಕಾ ವಿರುದ್ಧ ನಡೆದ ಫೈನಲ್ ಫೈಟ್ನಲ್ಲಿ ಆಸೀಸ್ ವನಿತೆಯರು 19 ರನ್ಗಳಿಂದ ಜಯ ಸಾಧಿಸಿದರು. ವಿಶೇಷ ಎಂದರೆ ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ವಿಶ್ವ ದಾಖಲೆಯನ್ನು ಕೂಡ ನಿರ್ಮಿಸಿದರು.
ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವುದರೊಂದಿಗೆ ಅತೀ ಹೆಚ್ಚು ಐಸಿಸಿ ಟ್ರೋಫಿಗಳನ್ನು ಗೆದ್ದ ಕ್ಯಾಪ್ಟನ್ ಎಂಬ ವಿಶ್ವ ದಾಖಲೆ ಮೆಗ್ ಲ್ಯಾನಿಂಗ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಸರಿನಲ್ಲಿತ್ತು.
ರಿಕಿ ಪಾಂಟಿಂಗ್ ತಮ್ಮ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಎರಡು ಏಕದಿನ ವಿಶ್ವಕಪ್ (2003, 2007) ಹಾಗೂ ಎರಡು ಚಾಂಪಿಯನ್ಸ್ ಟ್ರೋಫಿ (2006, 2009) ತಂದುಕೊಟ್ಟಿದ್ದರು. ಈ ಮೂಲಕ ಅತ್ಯಧಿಕ ಐಸಿಸಿ ಟ್ರೋಫಿ ಗೆದ್ದ ನಾಯಕ ಎನಿಸಿಕೊಂಡಿದ್ದರು.
ಇದೀಗ 5ನೇ ಬಾರಿ ಐಸಿಸಿ ಟ್ರೋಫಿ ಗೆಲ್ಲುವ ಮೂಲಕ ಮೆಗ್ ಲ್ಯಾನಿಂಗ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಲ್ಯಾನಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು 3 ಟಿ20 ವಿಶ್ವಕಪ್ (2014, 2018, 2020) ಹಾಗೂ 1 ಏಕದಿನ ವಿಶ್ವಕಪ್ (2022) ಗೆದ್ದಿತ್ತು.
ಇದೀಗ ನಾಲ್ಕನೇ ಬಾರಿ ತಂಡವನ್ನು ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟಕ್ಕೇರಿಸುವ ಮೂಲಕ ಮೆಗ್ ಲ್ಯಾನಿಂಗ್ ಒಟ್ಟು 5 ಐಸಿಸಿ ಟ್ರೋಫಿ ಗೆದ್ದ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ. ಈ ಮೂಲಕ ರಿಕಿ ಪಾಂಟಿಂಗ್ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಅಷ್ಟೇ ಅಲ್ಲದೆ ಐದು ವಿಶ್ವಕಪ್ ಗೆದ್ದ ಏಕೈಕ ನಾಯಕಿ ಎಂಬ ವಿಶ್ವ ದಾಖಲೆಯನ್ನೂ ಕೂಡ ತಮ್ಮದಾಗಿಸಿಕೊಂಡಿದ್ದಾರೆ.
ಅಂದಹಾಗೆ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂದಾಳತ್ವದಲ್ಲಿ ಭಾರತ ತಂಡವು 2007 ರಲ್ಲಿ ಟಿ20 ವಿಶ್ವಕಪ್, 2011 ರಲ್ಲಿ ಏಕದಿನ ವಿಶ್ವಕಪ್ ಹಾಗೂ 2013 ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತ್ತು. ಅದರಂತೆ ಅತ್ಯಧಿಕ ಐಸಿಸಿ ಟ್ರೋಫಿ ಗೆದ್ದ ನಾಯಕರುಗಳ ಪಟ್ಟಿಯಲ್ಲಿ ಧೋನಿ 3ನೇ ಸ್ಥಾನದಲ್ಲಿದ್ದಾರೆ.