
ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ (Mitchell Starc) ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಕೇವಲ 15 ಎಸೆತಗಳಲ್ಲಿ. ಜಮೈಕಾದ ಸಬೀನಾ ಪಾರ್ಕ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ಟಾರ್ಕ್ ಭರ್ಜರಿ ಬೌಲಿಂಗ್ ಸಂಘಟಿಸಿದ್ದರು. ಈ ಭರ್ಜರಿ ಬೌಲಿಂಗ್ನೊಂದಿಗೆ ವರ್ಲ್ಡ್ ರೆಕಾರ್ಡ್ ತನ್ನದಾಗಿಸಿಕೊಳ್ಳುವಲ್ಲಿ ಆಸೀಸ್ ವೇಗಿ ಯಶಸ್ವಿಯಾಗಿದ್ದಾರೆ.

ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಮೊದಲ ಓವರ್ ಎಸೆದ ಮಿಚೆಲ್ ಸ್ಟಾರ್ಕ್ ಯಾವುದೇ ರನ್ ನೀಡದೇ 3 ವಿಕೆಟ್ ಕಬಳಿಸಿದ್ದರು. ಅಲ್ಲದೆ ಮೂರನೇ ಓವರ್ನಲ್ಲಿ 6 ರನ್ ನೀಡಿ ಮತ್ತೆರಡು ವಿಕೆಟ್ಗಳನ್ನು ಪಡೆದರು. ಈ ಮೂಲಕ ಕೇವಲ 15 ಎಸೆತಗಳಲ್ಲಿ 5 ವಿಕೆಟ್ ಉರುಳಿಸಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಕಡಿಮೆ ಎಸೆತಗಳ ಮೂಲಕ 5 ವಿಕೆಟ್ ಕಬಳಿಸಿದ ವಿಶ್ವ ದಾಖಲೆ ಸ್ಟಾರ್ಕ್ ಪಾಲಾಯಿತು.

ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಅಸ್ಟ್ರೇಲಿಯಾದ ಎರ್ನೀ ಟೋಶ್ಯಾಕ್, ಇಂಗ್ಲೆಂಡ್ನ ಸ್ಟುವರ್ಟ್ ಬ್ರಾಡ್ ಹಾಗೂ ಆಸ್ಟ್ರೇಲಿಯಾದ ಸ್ಕಾಟ್ ಬೋಲ್ಯಾಂಡ್ ಹೆಸರಿನಲ್ಲಿತ್ತು. ಎರ್ನೀ ಟೋಶ್ಯಾಕ್ 1947 ರಲ್ಲಿ ಟೀಮ್ ಇಂಡಿಯಾ ವಿರುದ್ಧ 19 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿದ್ದರು. ಇನ್ನು ಸ್ಟುವರ್ಟ್ ಬ್ರಾಡ್ 2015 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 19 ಎಸೆತಗಳಲ್ಲಿ 5 ವಿಕೆಟ್ಗಳನ್ನು ಉರುಳಿಸಿದ್ದರು. ಇನ್ನು 2021 ರಲ್ಲಿ ಸ್ಕಾಟ್ ಬೋಲ್ಯಾಂಡ್ ಇಂಗ್ಲೆಂಡ್ ವಿರುದ್ಧ 19 ಎಸೆತಗಳಲ್ಲಿ 5 ವಿಕೆಟ್ ಪಡೆದಿದ್ದರು.

ಇದೀಗ ಈ ಮೂವರ ವಿಶ್ವ ದಾಖಲೆಯನ್ನುಅಳಿಸಿ ಹಾಕಿ ಹೊಸ ಇತಿಹಾಸ ನಿರ್ಮಿಸುವಲ್ಲಿ ಮಿಚೆಲ್ ಸ್ಟಾರ್ಕ್ ಯಶಸ್ವಿಯಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 2.3 ಓವರ್ಗಳಲ್ಲಿ 5 ವಿಕೆಟ್ ಕಬಳಿಸುವ ಮೂಲಕ, ಟೆಸ್ಟ್ ಇತಿಹಾಸದಲ್ಲೇ ಅತೀ ಕಡಿಮೆ ಎಸೆತಗಳಲ್ಲಿ ಐದು ವಿಕೆಟ್ಗಳನ್ನು ಉರುಳಿಸಿದ ಬೌಲರ್ ಎಂಬ ವಿಶ್ವ ದಾಖಲೆಯನ್ನು ಸ್ಟಾರ್ಕ್ ತನ್ನದಾಗಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ 7.3 ಓವರ್ಗಳಲ್ಲಿ 9 ರನ್ ನೀಡಿ 6 ವಿಕೆಟ್ ಕಬಳಿಸುವ ಮೂಲಕ ಮಿಚೆಲ್ ಸ್ಟಾರ್ಕ್ ಟೆಸ್ಟ್ ಕ್ರಿಕೆಟ್ನಲ್ಲಿ 400+ ವಿಕೆಟ್ಗಳನ್ನು ಸಹ ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ 2ನೇ ಎಡಗೈ ವೇಗಿ ಎಂಬ ಹೆಗ್ಗಳಿಕೆಯನ್ನು ಸ್ಟಾರ್ಕ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಪಾಕಿಸ್ತಾನ್ ತಂಡದ ಮಾಜಿ ಎಡಗೈ ವೇಗಿ ವಾಸಿಂ ಅಕ್ರಂ (414) ಈ ಸಾಧನೆ ಮಾಡಿದ್ದರು. ಇದೀಗ 402 ವಿಕೆಟ್ಗಳೊಂದಿಗೆ ಮಿಚೆಲ್ ಸ್ಟಾರ್ಕ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.