
ಟೀಮ್ ಇಂಡಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿ ಮಿಚೆಲ್ ಸ್ಟಾರ್ಕ್ ವಿಶೇಷ ವಿಶ್ವ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ಸ್ಟಾರ್ಕ್ ಮೊದಲ ಎಸೆತದಲ್ಲೇ ಆಘಾತ ನೀಡಿದ್ದರು.

ಟೀಮ್ ಇಂಡಿಯಾ ಇನಿಂಗ್ಸ್ನ ಮೊದಲ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ (0) ಅವರನ್ನು ಎಲ್ಬಿಡಬ್ಲ್ಯೂ ಮಾಡಿ ಸ್ಟಾರ್ಕ್ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಈ ಯಶಸ್ಸಿನೊಂದಿಗೆ ಮಿಚೆಲ್ ಸ್ಟಾರ್ಕ್ ಟೆಸ್ಟ್ ಕ್ರಿಕೆಟ್ನಲ್ಲಿ ವಿಶೇಷ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಅಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ಇಬ್ಬರು ಬೌಲರ್ಗಳು ಮಾತ್ರ ಇನಿಂಗ್ಸ್ನ ಮೊದಲ ಎಸೆತದಲ್ಲೇ ಮೂರು ಬಾರಿ ವಿಕೆಟ್ ಪಡೆದಿದ್ದಾರೆ. ಈ ಸಾಧನೆ ಮಾಡಿದ ಮೊದಲ ಬೌಲರ್ ಎಂದರೆ ಪೆಡ್ರೊ ಕಾಲಿನ್ಸ್. ಎರಡನೇ ಬೌಲರ್ ಮಿಚೆಲ್ ಸ್ಟಾರ್ಕ್.

ವೆಸ್ಟ್ ಇಂಡೀಸ್ ವೇಗಿ ಪೆಡ್ರೊ ಕಾಲಿನ್ಸ್ 2002 ಮತ್ತು 2004 ರಲ್ಲಿ ಬಾಂಗ್ಲಾದೇಶ್ ತಂಡದ ಆರಂಭಿಕ ಆಟಗಾರ ಹನಾನ್ ಸರ್ಕಾರ್ ಅವರನ್ನು ಮೂರು ಬಾರಿ ಮೊದಲ ಎಸೆತದಲ್ಲಿ ಔಟ್ ಮಾಡಿದ್ದರು. ಈ ಮೂಲಕ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲಿ ಮೂರು ಬಾರಿ ವಿಕೆಟ್ ಪಡೆದ ವಿಶ್ವದ ಏಕೈಕ ಬೌಲರ್ ಎನಿಸಿಕೊಂಡಿದ್ದರು.

ಇದೀಗ ಈ ವಿಶ್ವ ದಾಖಲೆಯನ್ನು ಮಿಚೆಲ್ ಸ್ಟಾರ್ಕ್ ಸರಿಗಟ್ಟಿದ್ದಾರೆ. 2016 ರಲ್ಲಿ ಶ್ರೀಲಂಕಾದ ದಿಮುತ್ ಕರುಣರತ್ನೆ ಹಾಗೂ 2021 ರಲ್ಲಿ ಇಂಗ್ಲೆಂಡ್ನ ರಾಯ್ ಬರ್ನ್ಸ್ ಅವರನ್ನು ಪಂದ್ಯದ ಮೊದಲ ಎಸೆತದಲ್ಲೇ ಔಟ್ ಮಾಡಿದ್ದ ಸ್ಟಾರ್ಕ್, ಇದೀಗ ಯಶಸ್ವಿ ಜೈಸ್ವಾಲ್ ಅವರನ್ನು ಮೊದಲ ಎಸೆತದಲ್ಲೇ ಪೆವಿಲಿಯನ್ಗೆ ಕಳುಹಿಸಿದ್ದಾರೆ.

ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಪಂದ್ಯದ ಮೊದಲ ಎಸೆತದಲ್ಲೇ ಮೂರು ಬಾರಿ ಗೋಲ್ಡನ್ ಡಕ್ ವಿಕೆಟ್ ಪಡೆದ ಆಸ್ಟ್ರೇಲಿಯಾದ ಮೊದಲ ಬೌಲರ್ ಹಾಗೂ ವಿಶ್ವದ 2ನೇ ವೇಗಿ ಎಂಬ ವಿಶ್ವ ದಾಖಲೆಯನ್ನು ಮಿಚೆಲ್ ಸ್ಟಾರ್ಕ್ ತಮ್ಮದಾಗಿಸಿಕೊಂಡಿದ್ದಾರೆ.