Updated on: Jun 17, 2023 | 7:35 AM
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಹಾಗೂ ಹಾಲಿ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮತ್ತೊಮ್ಮೆ 'ಮೆನ್ ಇನ್ ಯೆಲ್ಲೋ' ಜೊತೆ ಕೈಜೋಡಿಸಿದ್ದಾರೆ. ಅಮೇರಿಕಾದಲ್ಲಿ ಆರಂಭವಾಗಲಿರುವ ಮೇಜರ್ ಲೀಗ್ ಕ್ರಿಕೆಟ್ 2023 ರಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವನ್ನು ಫಾಫ್ ಡು ಪ್ಲೆಸಿಸ್ ಮುನ್ನಡೆಸಲಿದ್ದಾರೆ.
2011 ರಿಂದ 2021 ರವರೆಗೆ ಸುಮಾರು 10 ವರ್ಷಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಸಿಎಸ್ಕೆ ತಂಡದಲ್ಲಿ ಆರಂಭಿಕನ ಜವಬ್ದಾರಿಯನ್ನು ನಿರ್ವಹಿಸಿದ್ದ ಫಾಫ್ ಡು ಪ್ಲೆಸಿಸ್ ಅವರನ್ನು ಮೆಗಾ ಹರಾಜಿನಲ್ಲಿ ಆರ್ಸಿಬಿ ಫ್ರಾಂಚೈಸಿ 7 ಕೋಟಿ ರೂ.ಗೆ ಖರೀದಿಸಿ, ತಂಡದ ನಾಯಕತ್ವ ನೀಡಿತ್ತು. ಇದೀಗ ಫಾಫ್, ತನ್ನ ಹಳೆಯ ಫ್ರಾಂಚೈಸಿಗೆ ಮರಳಿದ್ದಾರೆ.
ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಫ್ರಾಂಚೈಸ್, ಟೆಕ್ಸಾಸ್ ಸೂಪರ್ ಕಿಂಗ್ಸ್ ಜೊತೆಗೆ 38 ವರ್ಷದ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಫಾಫ್ ಡು ಪ್ಲೆಸಿಸ್ ಸಹಿ ಹಾಕಿದ್ದಾರೆ ಮತ್ತು ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಬರೆದುಕೊಂಡಿದೆ.
ಇನ್ನು ಐಪಿಎಲ್ನಲ್ಲಿ ಸಿಎಸ್ಕೆ ಪರ 100 ಪಂದ್ಯಗಳನ್ನು ಆಡಿರುವ ಫಾಫ್ ಡು ಪ್ಲೆಸಿಸ್ 2935 ರನ್ ಕಲೆ ಹಾಕಿದ್ದಾರೆ. 2016 ಮತ್ತು 2017 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವ ಮೂಲಕ ಐಪಿಎಲ್ ವೃತ್ತಿಜೀವನ ಆರಂಭಿಸಿದ ಫಾಫ್ ಆ ಬಳಿಕ ಚೆನ್ನೈ ತಂಡ ಸೇರಿಕೊಂಡಿದ್ದರು.
ಐಪಿಎಲ್ 2023 ರಲ್ಲಿ ಆರ್ಸಿಬಿ ಪರ ಅದ್ಭುತ ನೀಡಿದ ಫಾಫ್, ಆಡಿದ 14 ಪಂದ್ಯಗಳಲ್ಲಿ 153.68 ಸ್ಟ್ರೈಕ್ ರೇಟ್‌ನೊಂದಿಗೆ 730 ರನ್ ಕಲೆಹಾಕಿದರು. ಇಡೀ ಸೀಸನ್ನಲ್ಲಿ ಫಾಫ್ ಒಂದೇ ಒಂದು ಶತಕ ಬಾರಿಸದಿದ್ದರೂ, ಎಂಟು ಅರ್ಧ ಶತಕಗಳನ್ನು ಸಿಡಿಸುವುದರಲ್ಲಿ ಯಶಸ್ವಿಯಾದರು. ಇದರೊಂದಿಗೆ ಆರೆಂಜ್ ಕ್ಯಾಪ್ ರೇಸ್ನಲ್ಲಿ ಸ್ಥಾನ ಪಡೆದಿದ್ದರು. ಆದರೆ ಅಂತಿಮವಾಗಿ ಈ ರೇಸ್ನಲ್ಲಿ ಗೆದ್ದ ಶುಭ್ಮನ್ ಗಿಲ್, ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು.
ಮೇಜರ್ ಲೀಗ್ ಕ್ರಿಕೆಟ್ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ನಡೆಯುವ ಮೊದಲ ಫ್ರಾಂಚೈಸಿ ಕ್ರಿಕೆಟ್ ಲೀಗ್ ಆಗಿದೆ. ಲೀಗ್ ಜುಲೈ 13, 2023 ರಿಂದ ಪ್ರಾರಂಭವಾಗುತ್ತಿದ್ದು, ಮೊದಲ ಪಂದ್ಯವು ಟೆಕ್ಸಾಸ್ ಸೂಪರ್ ಕಿಂಗ್ಸ್ ಮತ್ತು ಲಾಸ್ ಏಂಜಲೀಸ್ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಪಂದ್ಯಾವಳಿಯ ಅಂತಿಮ ಪಂದ್ಯವು ಜುಲೈ 30, 2023 ರಂದು ನಡೆಯಲಿದೆ.