- Kannada News Photo gallery Cricket photos R Ashwin Team india star spinner ravichandran ashwin on cricket retirment
R. Ashwin: ‘ಪತ್ನಿಗೆ ಮೊದಲೇ ಹೇಳಿದ್ದೆ’; ನಿವೃತ್ತಿಯ ಬಗ್ಗೆ ಕೊನೆಗೂ ಮೌನ ಮುರಿದ ಅಶ್ವಿನ್..!
R. Ashwin: ವಿಶ್ವದ ನಂಬರ್ 1 ಟೆಸ್ಟ್ ಬೌಲರ್ ಆಗಿರುವ ಅಶ್ವಿನ್ಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುವ ಅವಕಾಶ ನೀಡದಿರುವುದರ ಬಗ್ಗೆ ಯಾವುದೇ ಹೇಳಿಕೆ ನೀಡದೆ ಮೌನಕ್ಕೆ ಶರಣಾಗಿದ್ದ ಅಶ್ವಿನ್ ಇದೀಗ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
Updated on:Jun 16, 2023 | 9:30 PM

ಟೀಂ ಇಂಡಿಯಾದ ಅತ್ಯಂತ ಅನುಭವಿ ಬೌಲರ್‌ಗಳಲ್ಲಿ ಒಬ್ಬರಾಗಿರುವ ಆರ್ ಅಶ್ವಿನ್ ಬಗ್ಗೆ ಸದ್ಯ ಭಾರತ ಕ್ರಿಕೆಟ್ನಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ವಿಶ್ವದ ನಂಬರ್ 1 ಟೆಸ್ಟ್ ಬೌಲರ್ ಆಗಿರುವ ಅಶ್ವಿನ್ಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುವ ಅವಕಾಶ ನೀಡದಿರುವುದು ಕ್ರಿಕೆಟ್ ಪಂಡಿತರ ಕಣ್ಣು ಕೆಂಪಾಗಾಗಿಸಿದೆ. ಟೆಸ್ಟ್ ಆರಂಭವಾಗಿನಿಂದ ಆರಂಭವಾದ ಈ ಚರ್ಚೆ, ಪಂದ್ಯ ಮುಗಿದ ಬಳಿಕವೂ ಮುಂದುವರೆದಿದೆ.

ಈ ಬಗ್ಗೆ ಯಾವುದೇ ಹೇಳಿಕೆ ನೀಡದೆ ಮೌನಕ್ಕೆ ಶರಣಾಗಿದ್ದ ಅಶ್ವಿನ್ ಇದೀಗ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಕ್ರಿಕೆಟ್ ಜೀವನದ ಕೊನೆಯ ಹಂತದಲ್ಲಿರುವ ಅಶ್ವಿನ್ ಅವರನ್ನು ಡಬ್ಲ್ಯುಟಿಸಿ ಫೈನಲ್ ತಂಡದಿಂದ ಕೈಬಿಟ್ಟು ರವೀಂದ್ರ ಜಡೇಜಾ ಅವರಿಗೆ ಅವಕಾಶ ನೀಡಲಾಗಿತ್ತು. ವಿಶ್ವ ಕ್ರಿಕೆಟ್‌ನ ನಂಬರ್ 1 ಬೌಲರ್ ಅನ್ನು ತಂಡದಿಂದ ಹೊರಗಿಟ್ಟಿದ್ದು ಏಕೆ ಎಂಬ ಪ್ರಶ್ನೆಯನ್ನು ಕ್ರಿಕೆಟ್ ಅಭಿಮಾನಿಗಳು ಈಗಲೂ ಕೇಳುತ್ತಿದ್ದಾರೆ.

ಈ ಎಲ್ಲಾ ವಿಚಾರಗಳ ಬಗ್ಗೆ ಇದೀಗ ಅಶ್ವಿನ್ ಮೌನ ಮುರಿದಿದ್ದು, “ನಾನು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲು ಇಷ್ಟಪಟ್ಟಿದ್ದೆ. ಏಕೆಂದರೆ ತಂಡವನ್ನು ಫೈನಲ್ವರೆಗೆ ಕೊಂಡೊಯ್ಯುವಲ್ಲಿ ನಾನು ನಿರ್ಣಾಯಕ ಪಾತ್ರ ವಹಿಸಿದ್ದೇನೆ. ಆದರೆ ನನಗೆ ಟೆಸ್ಟ್ ತಂಡದಲ್ಲಿ ಅವಕಾಶವಿಲ್ಲ ಎಂಬ ಮಾಹಿತಿ ಟೆಸ್ಟ್ ಆರಂಭಕ್ಕೂ 48 ಗಂಟೆಗಳ ಮುನ್ನವೇ ತಿಳಿದಿತ್ತು. ಆದರೆ ಈ ಬಗ್ಗೆ ಚಿಂತಿಸದ ನಾನು, ನನ್ನ ತಂಡ ಗೆಲ್ಲಲು ಸಹಕಾರಿಯಾಗಬೇಕು ಎಂದು ಬಯಸಿದೆ ಎಂದಿದ್ದಾರೆ.

ಇದೇ ವೇಳೆ ಅಶ್ವಿನ್ ಆಘಾತಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದು, “ಬಾರ್ಡರ್ ಗವಾಸ್ಕರ್ ಟ್ರೋಫಿ ನಂತರ ನಾನು ಭಾರತ ಕ್ರಿಕೆಟ್ನಿಂದ ನಿವೃತ್ತಿಯಾಗಲು ನನ್ನ ಮನಸ್ಸು ಸಿದ್ಧವಾಗಿತ್ತು ಎಂದು ಅಶ್ವಿನ್ ಹೇಳಿದ್ದಾರೆ. ಆಸಕ್ತಿದಾಯಕ ವಿಚಾರವೆಂದರೆ, ಆಸ್ಟ್ರೇಲಿಯ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅಶ್ವಿನ್ 25 ವಿಕೆಟ್ ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದಿದ್ದರು.

ಮುಂದುವರೆದು ಮಾತನಾಡಿರುವ ಅಶ್ವಿನ್, ನಾನು ಬಾಂಗ್ಲಾದೇಶ ಪ್ರವಾಸವನ್ನು ಮುಗಿಸಿ ಮನೆಗೆ ಮರಳಿದ ನಾನು, ಮೊಣಕಾಲು ನೋವಿನಿಂದ ಬಳಲುತ್ತಿದ್ದರಿಂದ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಂತರ ನಿವೃತ್ತಿ ಹೊಂದಬಹುದು ಎಂದು ನನ್ನ ಹೆಂಡತಿ ಬಳಿ ಹೇಳಿಕೊಂಡಿದ್ದೆ ಎಂದು ಅಶ್ವಿನ್ ತಮ್ಮ ನಿವೃತ್ತಿ ನಿರ್ಧಾರದ ಬಗ್ಗೆ ಹೇಳಿಕೊಂಡಿದ್ದಾರೆ.
Published On - 9:29 pm, Fri, 16 June 23




