
ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ (MLC 2025) ಟೂರ್ನಿಯಲ್ಲಿ ನ್ಯೂಝಿಲೆಂಡ್ ದಾಂಡಿಗ ಫಿನ್ ಅಲೆನ್ (Finn Allen) ಅಬ್ಬರ ಮುಂದುವರೆದಿದೆ. ಅದು ಕೂಡ ಸಿಕ್ಸರ್ಗಳ ಸುರಿಮಳೆಯೊಂದಿಗೆ ಎಂಬುದೇ ಅಚ್ಚರಿ. ಈ ಬಾರಿಯ ಟೂರ್ನಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪರ ಕಣಕ್ಕಿಳಿಯುತ್ತಿರುವ ಅಲೆನ್ ಈವರೆಗೆ ಸಿಡಿಸಿರುವ ಸಿಕ್ಸರ್ಗಳ ಸಂಖ್ಯೆ ಬರೋಬ್ಬರಿ 33 ..!

ಮೊದಲ ಪಂದ್ಯದಲ್ಲಿ 19 ಸಿಕ್ಸ್ಗಳೊಂದಿಗೆ 151 ರನ್ ಬಾರಿಸಿದ್ದ ಫಿನ್ ಅಲೆನ್, ದ್ವಿತೀಯ ಪಂದ್ಯದಲ್ಲಿ 4 ಸಿಕ್ಸ್ಗಳೊಂದಿಗೆ 52 ರನ್ ಸಿಡಿಸಿದ್ದರು. ಇನ್ನು ಮೂರನೇ ಪಂದ್ಯದಲ್ಲಿ ಫಿನ್ ಅಲೆನ್ ಬ್ಯಾಟ್ನಿಂದ 2 ಸಿಕ್ಸ್ಗಳು ಮೂಡಿಬಂದಿದ್ದವು. ಇದೀಗ ನಾಲ್ಕನೇ ಪಂದ್ಯದಲ್ಲೂ ತನ್ನ ಬ್ಯಾಟಿಂಗ್ ಆರ್ಭಟವನ್ನು ತೋರಿಸಿದ್ದಾರೆ.

ಟೆಕ್ಸಾಸ್ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಫಿನ್ ಅಲೆನ್ ಕೇವಲ 35 ಎಸೆತಗಳಲ್ಲಿ 78 ರನ್ ಚಚ್ಚಿದ್ದಾರೆ. ಈ ವೇಳೆ ಅವರ ಬ್ಯಾಟ್ನಿಂದ ಸಿಡಿದ ಸಿಕ್ಸರ್ಗಳ ಸಂಖ್ಯೆ ಎಂಟು. ಈ ಮೂಲಕ ಕೇವಲ 4 ಇನಿಂಗ್ಸ್ಗಳಲ್ಲೇ ಬರೋಬ್ಬರಿ 33 ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದಾರೆ.

ಇಂಟ್ರೆಸ್ಟಿಂಗ್ ವಿಷಯ ಎಂದರೆ, ಈ ಬಾರಿಯ ಐಪಿಎಲ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿರುವುದು ನಿಕೋಲಸ್ ಪೂರನ್. ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿದಿದ್ದ ಪೂರನ್ 14 ಪಂದ್ಯಗಳಲ್ಲಿ 40 ಸಿಕ್ಸ್ ಬಾರಿಸಿ ಸಿಕ್ಸರ್ ಸರದಾರ ಎನಿಸಿಕೊಂಡಿದ್ದರು. ಆದರೆ ಅತ್ತ ಫಿನ್ ಅಲೆನ್ ಕೇವಲ 4 ಇನಿಂಗ್ಸ್ಗಳಲ್ಲೇ 33 ಸಿಕ್ಸ್ಗಳ ಸಂಖ್ಯೆಯನ್ನು ಮುಟ್ಟಿದ್ದಾರೆ.

ಅಷ್ಟೇ ಅಲ್ಲದೆ ಈ ಬಾರಿಯ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿದ್ದಾರೆ. 4 ಪಂದ್ಯಗಳಲ್ಲಿ 119 ಎಸೆತಗಳನ್ನು ಎದುರಿಸಿರುವ ಅಲೆನ್ ಬರೋಬ್ಬರಿ 295 ರನ್ ಕಲೆಹಾಕಿದ್ದಾರೆ. ಅದು ಕೂಡ 33 ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ. ಅಂದರೆ ಸಿಕ್ಸ್-ಫೋರ್ಗಳ ಮೂಲಕವೇ ಅಲೆನ್ 262 ರನ್ಗಳನ್ನು ಕಲೆಹಾಕಿರುವುದು ವಿಶೇಷ.