
ಟಿ20 ಕ್ರಿಕೆಟ್ ಇತಿಹಾಸದಲ್ಲಿ 400+ ವಿಕೆಟ್ ಕಬಳಿಸಿರುವುದು ಕೇವಲ 9 ಬೌಲರ್ಗಳು ಮಾತ್ರ. ಈ ಒಂಭತ್ತು ಬೌಲರ್ಗಳಲ್ಲಿ ಈ ಸಾಧನೆ ಮಾಡಿರುವುದು ಕೇವಲ ಐವರು ವೇಗಿಗಳು ಮಾತ್ರ. ಈ ಐವರುಗಳಲ್ಲಿ ಇದೀಗ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಕೂಡ ಒಬ್ಬರು.

ಪ್ರಸ್ತುತ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಟ್ರಿನ್ ಬಾಗೊ ನೈಟ್ ರೈಡರ್ಸ್ ಪರ ಕಣಕ್ಕಿಳಿಯುತ್ತಿರುವ ಮೊಹಮ್ಮದ್ ಅಮೀರ್ 2 ವಿಕೆಟ್ ಕಬಳಿಸಿದ್ದಾರೆ. ಈ ಎರಡು ವಿಕೆಟ್ ಗಳೊಂದಿಗೆ ಟಿ20 ಕ್ರಿಕೆಟ್ನಲ್ಲಿ 400 ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಅಮೀರ್ ಕೂಡ ಸೇರ್ಪಡೆಯಾಗಿದ್ದಾರೆ.

ಅಲ್ಲದೆ ಈ ಸಾಧನೆ ಮಾಡಿದ ಪಾಕಿಸ್ತಾನದ 2ನೇ ಬೌಲರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಪಾಕ್ ತಂಡದ ಮಾಜಿ ಎಡಗೈ ವೇಗಿ ವಹಾಬ್ ರಿಯಾಝ್ 344 ಇನಿಂಗ್ಸ್ ಗಳ ಮೂಲಕ ಒಟ್ಟು 413 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು. ಇದೀಗ ವಹಾಬ್ ಅವರ ದಾಖಲೆಯನ್ನು ಸರಿಗಟ್ಟುವಲ್ಲಿ ಅಮೀರ್ ಯಶಸ್ವಿಯಾಗಿದ್ದಾರೆ.

ಮೊಹಮ್ಮದ್ ಅಮೀರ್ ಈವರೆಗೆ 336 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ 7379 ಎಸೆತಗಳನ್ನು ಎಸೆದಿರುವ ಅವರು ಒಟ್ಟು 400 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ನಾಲ್ಕು ನೂರು ವಿಕೆಟ್ ಪಡೆದ ಪಾಕಿಸ್ತಾನದ 2ನೇ ಆಟಗಾರ ಹಾಗೂ ವಿಶ್ವದ 9ನೇ ಬೌಲರ್ ಎನಿಸಿಕೊಂಡಿದ್ದಾರೆ.

ಇನ್ನು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಕಬಳಿಸಿದ ವಿಶ್ವ ದಾಖಲೆ ಅಫ್ಘಾನಿಸ್ತಾನದ ರಶೀದ್ ಖಾನ್ ಹೆಸರಿನಲ್ಲಿದೆ. 483 ಟಿ20 ಇನಿಂಗ್ಸ್ ಗಳಲ್ಲಿ ಬೌಲಿಂಗ್ ಮಾಡಿರುವ ರಶೀದ್ ಖಾನ್ ಈವರೆಗೆ 660 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟಿ20 ಇತಿಹಾಸದಲ್ಲೇ 650+ ವಿಕೆಟ್ ಪಡೆದ ಏಕೈಕ ಬೌಲರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.