- Kannada News Photo gallery Cricket photos Mohammad Nabi now has won a match against 46 different countries
46 ದೇಶಗಳ ವಿರುದ್ಧ ಗೆಲುವು: ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದ ಮೊಹಮ್ಮದ್ ನಬಿ
Afghanistan vs South Africa: ಶಾರ್ಜಾದಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 33.3 ಓವರ್ಗಳಲ್ಲಿ 106 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಬೆನ್ನತ್ತಿದ ಅಫ್ಘಾನಿಸ್ತಾನ್ ತಂಡವು 26 ಓವರ್ಗಳಲ್ಲಿ 107 ರನ್ಗಳಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
Updated on: Sep 19, 2024 | 10:08 AM

ಸೌತ್ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಮ್ಯಾಚ್ನಲ್ಲಿ ಅಫ್ಘಾನಿಸ್ತಾನ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಅಫ್ಘಾನ್ ಆಲ್ರೌಂಡರ್ ಮೊಹಮ್ಮದ್ ನಬಿ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ 46 ದೇಶಗಳ ವಿರುದ್ಧ ಜಯ ಸಾಧಿಸುವ ಮೂಲಕ ಎಂಬುದೇ ವಿಶೇಷ.

ಅಂದರೆ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ದೇಶಗಳ ವಿರುದ್ಧ ಗೆಲುವು ಕಂಡ ವಿಶೇಷ ದಾಖಲೆಯೊಂದು ಮೊಹಮ್ಮದ್ ನಬಿ ಪಾಲಾಗಿದೆ. 2009 ರಿಂದ ಅಫ್ಘಾನಿಸ್ತಾನ್ ಪರ ಕಣಕ್ಕಿಳಿಯುತ್ತಿರುವ ನಬಿ ಈವರೆಗೆ 46 ದೇಶಗಳ ವಿರುದ್ಧ ಗೆಲುವಿನ ನಗೆ ಬೀರಿದಿದ್ದಾರೆ. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ದೇಶಗಳ ವಿರುದ್ಧ ಜಯ ಸಾಧಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.

ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಮೊಹಮ್ಮದ್ ನಬಿ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದರು. ಆ ಬಳಿಕ ಹಿಂತಿರುಗಿದ ನೋಡದ ನಬಿ, ಡೆನ್ಮಾರ್ಕ್, ಬಹ್ರೇನ್, ಮಲೇಷ್ಯಾ, ಸೌದಿ ಅರೇಬಿಯಾ, ಕುವೈತ್, ಕತಾರ್, ಇರಾನ್, ಥೈಲ್ಯಾಂಡ್, ಜಪಾನ್, ಬಹಾಮಾಸ್, ಬೋಟ್ಸ್ವಾನ, ಜರ್ಸಿ, ಫಿಜಿ, ತಾಂಜಾನಿಯಾ, ಇಟಲಿ, ಅರ್ಜೆಂಟೀನಾ, ಪಪುವಾ ನ್ಯೂಗಿನಿಯಾ, ಕೇಮನ್ ಐಲ್ಯಾಂಡ್, ಓಮನ್, ಚೀನಾ, ಸಿಂಗಾಪುರ್, ಪಾಕಿಸ್ತಾನ್, ಟ್ರಿನಿಡಾಡ್ ಮತ್ತು ಟೊಬಾಗೊ, ಯುಎಸ್ಎ, ಭೂತಾನ್, ಮಾಲ್ಡೀವ್ಸ್, ಬಾರ್ಬಡೋಸ್, ಉಗಾಂಡಾ, ಬರ್ಮುಡಾ, ಐರ್ಲೆಂಡ್, ಸ್ಕಾಟ್ಲೆಂಡ್, ನಮೀಬಿಯಾ, ನೆದರ್ಲ್ಯಾಂಡ್ಸ್, ಕೆನಡಾ, ಕೀನ್ಯಾ, ಹಾಂಗ್ ಕಾಂಗ್, ಯುಎಇ, ಜಿಂಬಾಬ್ವೆ, ವೆಸ್ಟ್ ಇಂಡೀಸ್, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ್, ಇಂಗ್ಲೆಂಡ್, ನ್ಯೂಝಿಲೆಂಡ್, ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ಜಯ ಸಾಧಿಸಿದ ಅಫ್ಘಾನ್ ತಂಡದ ಭಾಗವಾಗಿದ್ದಾರೆ.

ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ದೇಶಗಳ ವಿರುದ್ಧ ಗೆಲುವು ಕಂಡಂತಹ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸದ್ಯ 39 ವರ್ಷದ ಮೊಹಮ್ಮದ್ ನಬಿ ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಕಣಕ್ಕಿಳಿಯುವುದು ಖಚಿತ. ಈ ಮೂಲಕ 300 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ವಿಶೇಷ ಸಾಧಕರ ಪಟ್ಟಿಗೂ ಸೇರ್ಪಡೆಯಾಗಲಿದ್ದಾರೆ.

ಅಫ್ಘಾನಿಸ್ತಾನ್ ಪರ ಈವರೆಗೆ 294 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಮೊಹಮ್ಮದ್ ನಬಿ 269 ಇನಿಂಗ್ಸ್ಗಳಲ್ಲಿ ಒಟ್ಟು 5645 ರನ್ ಕಲೆಹಾಕಿದ್ದಾರೆ. ಈ ಮೂಲಕ ಅಫ್ಘಾನ್ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇನ್ನು 6 ಪಂದ್ಯಗಳಲ್ಲಿ ಕಣಕ್ಕಿಳಿದರೆ ಅಫ್ಘಾನಿಸ್ತಾನ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 300 ಮ್ಯಾಚ್ಗಳನ್ನಾಡಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.
