
ಓವಲ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾವನ್ನು 224 ರನ್‌ಗಳಿಗೆ ಆಲೌಟ್ ಮಾಡಿದ ಇಂಗ್ಲೆಂಡ್ ತಂಡ ವೇಗದ ಆರಂಭ ಪಡೆದುಕೊಂಡಿತು. ಆರಂಭಿಕ ಜೋಡಿ ಜ್ಯಾಕ್ ಕ್ರೌಲಿ ಮತ್ತು ಬೆನ್ ಡಕೆಟ್ ಮೊದಲ 15 ಓವರ್‌ಗಳಲ್ಲಿ ಭಾರತೀಯ ಬೌಲಿಂಗ್ ದಾಳಿಯನ್ನು ಹಾಳುಗೆಡವಿದರು. ಡಕೆಟ್-ಕ್ರೌಲಿ 12.5 ಓವರ್‌ಗಳಲ್ಲಿ 92 ರನ್ ಗಳಿಸಿದರು.

ಆದರೆ ಈ ವೇಳೆ ದಾಳಿಗಿಳಿದ ಆಕಾಶ್, ಬೆನ್ ಡಕೆಟ್ ಅವರನ್ನು ಔಟ್ ಮಾಡುವ ಮೂಲಕ ಈ ಜೊತೆಯಾಟವನ್ನು ಮುರಿದರು. ನಂತರ ಮತ್ತೊಬ್ಬ ಆರಂಭಿಕ ಜ್ಯಾಕ್ ಕ್ರೌಲಿಯನ್ನು ಪ್ರಸಿದ್ಧ್ ಕೃಷ್ಣ ಪೆವಿಲಿಯನ್‌ಗೆ ಕಳುಹಿಸಿದರು. ಇವರಿಬ್ಬರ ವಿಕೆಟ್ ಪತನದಿಂದ ಇಂಗ್ಲೆಂಡ್ ವೇಗಕ್ಕೆ ಕಡಿವಾಣ ಬಿದ್ದಿತು.

ಆದಾಗ್ಯೂ ಆ ಬಳಿಕ ಜೊತೆಯಾದ ನಾಯಕ ಓಲಿ ಪೋಪ್ ಹಾಗೂ ಮಾಜಿ ನಾಯಕ ಜೋ ರೂಟ್ ಇನ್ನಿಂಗ್ಸ್ ಕಟ್ಟಲು ಯತ್ನಿಸಿದರು. ಈ ವೇಳೆ ದಾಳಿಗಿಳಿದ ಮೊಹಮ್ಮದ್ ಸಿರಾಜ್ ತಮ್ಮ ಮ್ಯಾಜಿಕಲ್ ಬೌಲಿಂಗ್ ಮೂಲಕ ಪೋಪ್ರನ್ನು ಎಲ್ಬಿ ಬಲೆಗೆ ಕೆಡುವಿದರು. ಈ ವಿಕೆಟ್ ಮೂಲಕ ಸಿರಾಜ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶೇಷ ಮೈಲಿಗಲ್ಲನ್ನು ದಾಟಿದರು.

ಆಂಗ್ಲ ನಾಯಕ ಓಲಿ ಪೋಪ್ ಅವರನ್ನು ಔಟ್ ಮಾಡಿದ ಮೊಹಮ್ಮದ್ ಸಿರಾಜ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಸಿರಾಜ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇದುವರೆಗೆ 115 ವಿಕೆಟ್‌ಗಳನ್ನು ಪಡೆದಿದ್ದರೆ, ಏಕದಿನ ಪಂದ್ಯಗಳಲ್ಲಿ 71 ವಿಕೆಟ್‌ಗಳು ಮತ್ತು ಟಿ20ಯಲ್ಲಿ 14 ವಿಕೆಟ್‌ಗಳನ್ನು ಹೊಂದಿದ್ದಾರೆ.

2017 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಿದ ಮೊಹಮ್ಮದ್ ಸಿರಾಜ್, ಇದುವರೆಗೆ ಒಟ್ಟು 101 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 29.12 ರ ಸರಾಸರಿಯಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಸಿರಾಜ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 5 ಬಾರಿ ಐದು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೂಲಕ ಮೊಹಮ್ಮದ್ ಸಿರಾಜ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತೀಯ ಕ್ರಿಕೆಟ್‌ನ 14 ನೇ ವೇಗದ ಬೌಲರ್ ಆಗಿದ್ದಾರೆ. ಇನ್ನು ಓವಲ್ ಟೆಸ್ಟ್ ಪಂದ್ಯದ ಬಗ್ಗೆ ಹೇಳುವುದಾದರೆ ಮೊದಲ ಇನ್ನಿಂಗ್ಸ್‌ನಲ್ಲಿ ಸಿರಾಜ್ ಇದುವರೆಗೆ ಇಂಗ್ಲೆಂಡ್ ತಂಡದ ಪ್ರಮುಖ 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.