ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ.
ಈ ಪಂದ್ಯದಲ್ಲಿ 10 ಓವರ್ ಬೌಲ್ ಮಾಡಿದ್ದ ಶಮಿ 51 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಈ ಮೂಲಕ ಆಸ್ಟ್ರೇಲಿಯಾ ತಂಡವು 276 ರನ್ಗಳಿಗೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಈ ಐದು ವಿಕೆಟ್ಗಳೊಂದಿಗೆ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ 2ನೇ ಭಾರತೀಯ ಬೌಲರ್ ಎಂಬ ದಾಖಲೆಯನ್ನು ಶಮಿ ನಿರ್ಮಿಸಿದ್ದಾರೆ. ಅದು ಕೂಡ ಹರ್ಭಜನ್, ಶ್ರೀನಾಥ್ ಹಾಗೂ ಅಗರ್ಕರ್ ಅವರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ. ಹಾಗಿದ್ರೆ ಆಸೀಸ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ಟಾಪ್-5 ಭಾರತೀಯ ಬೌಲರ್ಗಳು ಯಾರೆಲ್ಲಾ ಎಂದು ನೋಡೋಣ...
1- ಕಪಿಲ್ ದೇವ್: ಭಾರತ ತಂಡದ ಮಾಜಿ ಆಲ್ರೌಂಡರ್ ಕಪಿಲ್ ದೇವ್ ಆಸ್ಟ್ರೇಲಿಯಾ ವಿರುದ್ಧ 41 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 45 ವಿಕೆಟ್ ಕಬಳಿಸುವ ಆಸೀಸ್ ವಿರುದ್ಧ ಅತ್ಯಧಿಕ ವಿಕೆಟ್ ಪಡೆದ ಟೀಮ್ ಇಂಡಿಯಾ ಬೌಲರ್ ಎನಿಸಿಕೊಂಡಿದ್ದಾರೆ.
2- ಮೊಹಮ್ಮದ್ ಶಮಿ: ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಶಮಿ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 32 ಪಂದ್ಯಗಳನ್ನಾಡಿರುವ ಶಮಿ ಒಟ್ಟು 37 ವಿಕೆಟ್ ಕಬಳಿಸಿದ್ದಾರೆ.
3- ಅಜಿತ್ ಅಗರ್ಕರ್: ಆಸ್ಟ್ರೇಲಿಯಾ ವಿರುದ್ಧ 21 ಏಕದಿನ ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಅಗರ್ಕರ್ ಒಟ್ಟು 36 ವಿಕೆಟ್ ಕಬಳಿಸಿದ್ದಾರೆ.
4- ಜಾವಗಲ್ ಶ್ರೀನಾಥ್: ಮೈಸೂರು ಎಕ್ಸ್ಪ್ರೆಸ್ ಖ್ಯಾತಿಯ ಜಾವಗಲ್ ಶ್ರೀನಾಥ್ ಆಸ್ಟ್ರೇಲಿಯಾ ವಿರುದ್ಧ 29 ಪಂದ್ಯಗಳನ್ನಾಡಿದ್ದು, ಈ ವೇಳೆ 33 ವಿಕೆಟ್ ಕಬಳಿಸಿದ್ದಾರೆ.
5- ಹರ್ಭಜನ್ ಸಿಂಗ್: ಆಸ್ಟ್ರೇಲಿಯಾ ವಿರುದ್ಧ 35 ಏಕದಿನ ಪಂದ್ಯಗಳನ್ನಾಡಿರುವ ಹರ್ಭಜನ್ ಸಿಂಗ್ ಒಟ್ಟು 32 ವಿಕೆಟ್ ಕಬಳಿಸಿದ್ದಾರೆ.