ಟೀಮ್ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಕಳೆದ ಎರಡು ತಿಂಗಳುಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ 2023 ರ ಮೊದಲ 4 ಪಂದ್ಯಗಳಿಂದ ಹೊರಗುಳಿದ ನಂತರ, ತಂಡಕ್ಕೆ ಮರಳಿದ ಶಮಿ ಅದ್ಭುತ ಪ್ರದರ್ಶನ ನೀಡಿ ತಂಡವನ್ನು ಫೈನಲ್‌ಗೆ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು.
ಮೊಹಮ್ಮದ್ ಶಮಿ ಅವರ ಪ್ರದರ್ಶನವನ್ನು ಕ್ರಿಕೆಟ್ ಪಂಡಿತರು ಶ್ಲಾಘಿಸಿದರು. ಆದರೆ ಪಾಕಿಸ್ತಾನದಿಂದ ಮಾತ್ರ ಶಮಿ ಬಗ್ಗೆ ದ್ವೇಷಪೂರಿತ ಹೇಳಿಕೆಗಳು ಮತ್ತು ತಪ್ಪು ಕಲ್ಪನೆಗಳು ಕೇಳಿಬಂದವು. ಅಂತಹ ಒಂದು ಸುಳ್ಳು ಸುದ್ದಿಗೆ ಇದೀಗ ಶಮಿ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.
ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶಮಿ 5 ವಿಕೆಟ್ ಪಡೆದರು. 5ನೇ ವಿಕೆಟ್ ಪಡೆದ ಬಳಿಕ ಶಮಿ ಮೈದಾನದಲ್ಲಿ ಮಂಡಿಯೂರಿ ತಲೆಬಾಗಿ ಕುಳಿತರು. ಅವನ ಎರಡೂ ಕೈಗಳು ನೆಲದ ಮೇಲಿದ್ದವು. ನಂತರ ಎದ್ದು ನಿಂತರು. ಈ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ ಪಾಕಿಸ್ತಾನಿ ಪತ್ರಕರ್ತರು ಮತ್ತು ಅಭಿಮಾನಿಗಳು, ಶಮಿ ಸಜ್ದಾ ಮಾಡಲು ಬಯಸಿದ್ದರು, ಆದರೆ ಅವರು ಭಾರತದಲ್ಲಿದ್ದ ಕಾರಣ ಮಾಡಲಿಲ್ಲ ಎಂದು ಹೇಳಿದ್ದರು.
ಕಳೆದ ಒಂದು ತಿಂಗಳಿಂದ ಈ ವಿಚಾರದ ಬಗ್ಗೆ ಏನನ್ನೂ ಹೇಳದ ಶಮಿ ಇದೀಗ ಸ್ಪಷ್ಟನೆ ನೀಡಿದ್ದಾರೆ. ನಾನು ಭಾರತೀಯ ಮುಸ್ಲಿಂ ಎಂದು ಹೆಮ್ಮೆಪಡುತ್ತೇನೆ. ಭಾರತದ ಯಾವುದೇ ವೇದಿಕೆಗೆ ಯಾವಾಗ ಬೇಕಾದರೂ ತಲೆಬಾಗಬಹುದು ಮತ್ತು ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಶಮಿ ಖಡಕ್ ಹೇಳಿದ್ದಾರೆ.
ಪಾಕಿಸ್ತಾನಿಗಳು ತೊಂದರೆ ಕೊಡುವುದರ ಬಗ್ಗೆ ಮಾತ್ರ ಯೋಚಿಸುತ್ತಾರೆ ಮತ್ತು ಗಾಸಿಪ್ ಮಾಡಲು ಇಷ್ಟಪಡುತ್ತಾರೆ ಎಂದು ಹೇಳುವ ಮೂಲಕ ಸುಳ್ಳು ಸುದ್ದಿ ಹರಿ ಬಿಡುತ್ತಿದ್ದ ಪಾಕಿಸ್ತಾನಿಗಳ ಬಾಯಿ ಮುಚ್ಚಿಸಿದ್ದಾರೆ. ಶಮಿ ಹೇಳಿಕೆ ಈಗ ಸಖತ್ ವೈರಲ್ ಆಗುತ್ತಿದೆ.
ಲಂಕಾ ವಿರುದ್ಧದ ಪಂದ್ಯದಲ್ಲಿ ಶಮಿ ಬೇಗನೆ 3 ವಿಕೆಟ್‌ಗಳನ್ನು ಕಿತ್ತಿದ್ದರಯ. ಅಲ್ಲದೆ ಮುಂದಿನ 2-3 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕೀಳಬೇಕು ಎಂದು ಪಣತೊಟ್ಟಿದ್ದರಂತೆ. ಇದಕ್ಕಾಗಿ ಅವರು ತಮ್ಮ ಮಿತಿಗಿಂತ ಹೆಚ್ಚು ಕಠಿಣವಾಗಿ ಬೌಲ್ ಮಾಡಿದ್ದಾರೆ. 6ನೇ ಓವರ್ನಲ್ಲಿ 5ನೇ ವಿಕೆಟ್ ಕೂಡ ಪಡೆದಿದ್ದಾರೆ. ಆಗ ಸುಸ್ತಾಗಿ ಮಂಡಿಯೂರಿ ಕೆಳಗೆ ಬಿದ್ದೆ ಎಂದು ಶಮಿ ಹೇಳಿದ್ದಾರೆ.
Published On - 10:52 am, Thu, 14 December 23