ಏಕದಿನ ವಿಶ್ವಕಪ್ 2023 ರ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ, ನೆದರ್ಲೆಂಡ್ಸ್ ತಂಡವನ್ನು 160 ರನ್‌ಗಳಿಂದ ಸೋಲಿಸಿ ಟೂರ್ನಿಯಲ್ಲಿ ಸತತ 9 ನೇ ಗೆಲುವು ಸಾಧಿಸಿದ ದಾಖಲೆ ಬರೆದಿದೆ. ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಅನೇಕ ಆಟಗಾರರು ಹಲವು ಹೊಸ ದಾಖಲೆಗಳನ್ನು ಮಾಡಿದರು. ಇದರಲ್ಲಿ ಸೇರಿರುವ ಒಂದು ಹೆಸರು ಸರ್ ರವೀಂದ್ರ ಜಡೇಜಾ.
ಇದುವರೆಗೆ ಪಂದ್ಯಾವಳಿಯಲ್ಲಿ ಚೆಂಡಿನೊಂದಿಗೆ ಅದ್ಭುತ ಪ್ರದರ್ಶನ ನೀಡಿರುವ ಜಡೇಜಾ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ 2 ವಿಕೆಟ್ ಪಡೆದರು. ಇದರೊಂದಿಗೆ ಏಕದಿನ ವಿಶ್ವಕಪ್‌ನಲ್ಲಿ ದೊಡ್ಡ ದಾಖಲೆಯನ್ನು ಮುರಿದು, ಇಬ್ಬರು ಮಾಜಿ ಭಾರತೀಯ ದಿಗ್ಗಜರಾದ ಅನಿಲ್ ಕುಂಬ್ಳೆ ಮತ್ತು ಯುವರಾಜ್ ಸಿಂಗ್ ಅವರನ್ನು ಹಿಂದಿಕ್ಕಿದರು.
ಏಕದಿನ ವಿಶ್ವಕಪ್‌ನ ಒಂದು ಆವೃತ್ತಿಯಲ್ಲಿ ಭಾರತದ ಸ್ಪಿನ್ ಬೌಲರ್ ಆಗಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಇದೀಗ ರವೀಂದ್ರ ಜಡೇಜಾ ಹೆಸರಿನಲ್ಲಿ ದಾಖಲಾಗಿದೆ. ಇಲ್ಲಿಯವರೆಗೆ, ಈ ಮೆಗಾ ಇವೆಂಟ್‌ನಲ್ಲಿ 9 ಪಂದ್ಯಗಳನ್ನಾಡಿರುವ ಜಡೇಜಾ 18.25 ಸರಾಸರಿಯಲ್ಲಿ ಒಟ್ಟು 16 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇದರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೇವಲ 33 ರನ್ ನೀಡಿ 5 ವಿಕೆಟ್ ಪಡೆದಿದ್ದು, ಈ ವಿಶ್ವಕಪ್‌ನಲ್ಲಿ ಜಡೇಜಾ ಅವರ ಇದುವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ.
ಇದರೊಂದಿಗೆ ರವೀಂದ್ರ ಜಡೇಜಾ ಏಕದಿನ ವಿಶ್ವಕಪ್ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದಿದ್ದ ಅನಿಲ್ ಕುಂಬ್ಳೆ ಮತ್ತು ಯುವರಾಜ್ ಸಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಈ ಹಿಂದೆ 1996ರ ವಿಶ್ವಕಪ್‌ನಲ್ಲಿ ಕನ್ನಡಿಗ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ಅನಿಲ ಕುಂಬ್ಳೆ 15 ವಿಕೆಟ್‌ಗಳನ್ನು ಪಡೆದು ಈ ಸಾಧನೆ ಮಾಡಿದ್ದರು.
ಅನಿಲ್ ಕುಂಬ್ಳೆ ಬಳಿಕ ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ 2011ರ ವಿಶ್ವಕಪ್‌ನಲ್ಲಿ ಒಟ್ಟು 15 ವಿಕೆಟ್‌ಗಳನ್ನು ಕಬಳಿಸಿ ಒಂದು ಆವೃತ್ತಿಯಲ್ಲಿ ಅಧಿಕ ವಿಕೆಟ್ ಪಡೆದ ಭಾರತೀಯ ಬೌಲರ್ಗಳ ಪೈಕಿ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದರು.
ಇನ್ನು ಈ ಪಟ್ಟಿಯಲ್ಲಿ ಕುಲ್ದೀಪ್ ಯಾದವ್ ಅವರ ಹೆಸರೂ ಸೇರಿದ್ದು, ಈ ಬಾರಿಯ ವಿಶ್ವಕಪ್‌ನಲ್ಲಿ ಕುಲ್ದೀಪ್ ಇದುವರೆಗೆ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ.