
ಸೌತ್ ಆಫ್ರಿಕಾ ವಿರುದ್ಧ ನಡೆದ 3 ಪಂದ್ಯಗಳ ಏಕದಿನ ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಿಂದ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟಿದೆ.

ಕ್ರಿಕೆಟ್ ಇತಿಹಾಸದಲ್ಲಿ ಒಂದೇ ವರ್ಷ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. ಸ್ಟೀವ್ ವಾ ನಾಯಕತ್ವದ ಆಸೀಸ್ ಪಡೆಯು 2003 ರಲ್ಲಿ ಬರೋಬ್ಬರಿ 38 ಪಂದ್ಯಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು.

ಅಂದು 8 ಟೆಸ್ಟ್ ಹಾಗೂ 30 ಏಕದಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ ತಂಡವು ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದಿತ್ತು. ಆದರೆ ಇದಾದ ಬಳಿಕ ಯಾವುದೇ ತಂಡ ಒಂದೇ ವರ್ಷ ಇಷ್ಟೊಂದು ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.

ಆದರೆ ಈ ವರ್ಷ ಟೀಮ್ ಇಂಡಿಯಾ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಒಟ್ಟು 38 ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ಹೊಸ ಇತಿಹಾಸ ಬರೆದಿದೆ. ಅಲ್ಲದೆ ಆಸ್ಟ್ರೇಲಿಯಾ ತಂಡವು ಬರೆದಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟಿದೆ.

2022 ರಲ್ಲಿ ಟೀಮ್ ಇಂಡಿಯಾ 2 ಟೆಸ್ಟ್, 13 ಏಕದಿನ ಹಾಗೂ 23 ಟಿ20 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಒಟ್ಟು 38 ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ ಇದೀಗ ಆಸೀಸ್ ದಾಖಲೆಯನ್ನು ಸರಿಗಟ್ಟಿ ಹೊಸ ಇತಿಹಾಸ ಬರೆಯುವತ್ತ ಹೆಜ್ಜೆಯನ್ನಿಟ್ಟಿದೆ.