- Kannada News Photo gallery Cricket photos Kannada News | MS Dhoni and Shubman Gill set to create a historic record in CSK vs GT IPL 2023 Final Match
MS Dhoni: ಐತಿಹಾಸಿಕ ದಾಖಲೆ ಸೃಷ್ಟಿಸಲು ಸಜ್ಜಾದ ಎಂಎಸ್ ಧೋನಿ, ಶುಭ್ಮನ್ ಗಿಲ್: ಇದುವರೆಗೆ ಯಾರೂ ಮಾಡಿರದ ಸಾಧನೆ
Shubman Gill, CSK vs GT IPL 2023 Final: ಚೆನ್ನೈ ಹಾಗೂ ಗುಜರಾತ್ ನಡುವಣ ಐಪಿಎಲ್ 2023 ಫೈನಲ್ ಪಂದ್ಯದಲ್ಲಿ ಗುಜರಾತ್ ಆರಂಭಿಕ ಶುಭ್ಮನ್ ಗಿಲ್ ಅಪರೂಪದ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.
Updated on:May 28, 2023 | 9:54 AM

73 ಪಂದ್ಯಗಳು, 59 ದಿನಗಳು: ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿ ಫೈನಲ್ ಹಂತಕ್ಕೆ ಬಂದು ನಿಂತಿದೆ. ಇಂದು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಐಪಿಎಲ್ 2023 ಫೈನಲ್ನ ರೋಚಕ ಕಾದಾಟ ನಡೆಯಲಿದೆ.

16 ಆವೃತ್ತಿಯ ಐಪಿಎಲ್ನಲ್ಲಿ ಸಿಎಸ್ಕೆ ಇಂದು 10ನೇ ಬಾರಿ ಫೈನಲ್ನಲ್ಲಿ ಕಣಕ್ಕಿಳಿದ ಸಾಧನೆ ಮಾಡಲಿದೆ. ಒಟ್ಟು 9 ಬಾರಿ ಫೈನಲ್ ಆಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಂತಿಮ ಪಂದ್ಯದಲ್ಲಿ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಅಂದರೆ ಹತ್ತು ಫೈನಲ್ಗಳಲ್ಲಿ ಧೋನಿ ಪಡೆ 5 ಬಾರಿ ಸೋಲನುಭವಿಸಿದೆ.

ಚೆನ್ನೈ ಗೆದ್ದರೆ ಐದನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಲಿದೆ. ಸಿಎಸ್ಕೆ ಸೋತರೆ ಗುಜರಾತ್ ಟೈಟಾನ್ಸ್ 2ನೇ ಬಾರಿ ಕಿರೀಟ ಮುಡಿಗೇರಿಸಿಕೊಳ್ಳಲಿದೆ.

ಇದರ ಜೊತೆಗೆ ಎಂಎಸ್ ಧೋನಿ ಗುಜರಾತ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದರೆ, ಐಪಿಎಲ್ನಲ್ಲಿ 250 ಪಂದ್ಯಗಳನ್ನು ಪೂರೈಸಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಅಲ್ಲದೆ 11 ಐಪಿಎಲ್ ಫೈನಲ್ ಪಂದ್ಯವನ್ನಾಡಿದ ಏಕೈಕ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ.

ಇದೇ ಪಂದ್ಯದಲ್ಲಿ ಗುಜರಾತ್ ಆರಂಭಿಕ ಶುಭ್ಮನ್ ಗಿಲ್ ಅಪರೂಪದ ದಾಖಲೆ ಮುರಿಯಲು ಸಜ್ಜಾಗಿದ್ದಾರೆ. ಭರ್ಜರಿ ಫಾರ್ಮ್ನಲ್ಲಿರುವ ಗಿಲ್ ಕಳೆದ ನಾಲ್ಕು ಪಂದ್ಯಗಳಲ್ಲಿ ಬರೋಬ್ಬರಿ 3 ಶತಕ ಸಿಡಿಸಿದ್ದಾರೆ. ಈ ಮೂಲಕ ಕಿಂಗ್ ಕೊಹ್ಲಿಯ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.

ಈ ಪಂದ್ಯದಲ್ಲಿ ಗಿಲ್ 123 ರನ್ ಬಾರಿಸಿದರೆ, ಒಂದು ಆವೃತ್ತಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರನೆಂಬ ದಾಖಲೆ ಬರೆದಿರುವ ಕಿಂಗ್ ಕೊಹ್ಲಿಯನ್ನು ಹಿಂದಿಕ್ಕಲಿದ್ದಾರೆ. ಸದ್ಯ ಐಪಿಎಲ್‌ನ ಒಂದು ಸೀಸನ್‌ನಲ್ಲಿ 973 ರನ್‌ಗಳ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಇದನ್ನು ಮುರಿಯಲು ಗಿಲ್ಗೆ 123 ರನ್ ಬೇಕಾಗಿದೆ.

ಈ ಬಾರಿಯ ಐಪಿಎಲ್ನಲ್ಲಿ ಪ್ರಶಸ್ತಿ ಗೆದ್ದ ವಿಜೇತ ತಂಡಕ್ಕೆ ಬರೋಬ್ಬರಿ 20 ಕೋಟಿ ರೂ. ಸಿಗಲಿದೆ. ಅಂತೆಯೆ ರನ್ನರ್ ಅಪ್ ಆದ ತಂಡಕ್ಕೆ 13 ಕೋಟಿ ರೂ. ನಿಗದಿ ಮಾಡಲಾಗಿದೆ. ಮೂರನೇ ಸ್ಥಾನಕ್ಕೆ ಅಭಿಯಾನ ಅಂತ್ಯಗೊಳಿಸಿದ ಮುಂಬೈ ಇಂಡಿಯನ್ಸ್ ತಂಡಕ್ಕೆ 7 ಕೋಟಿ ಮತ್ತು ನಾಲ್ಕನೇ ಸ್ಥಾನ ಲಖನೌ ಸೂಪರ್ ಜೈಂಟ್ಸ್ ಟೀಮ್ಗೆ 6.5 ಕೋಟಿ ರೂ. ನೀಡಲಾಗಿದೆ.
Published On - 9:53 am, Sun, 28 May 23
