
ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಕೆಲ ದಿನಗಳ ಹಿಂದೆ ಸಪ್ತಪದಿ ತುಳಿದಿದ್ದರು. ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಆಥಿಯಾ ಶೆಟ್ಟಿಯನ್ನು ಕೆಎಲ್ಆರ್ ವರಿಸಿದ್ದರು.

ಜನವರಿ 23 ರಂದು ನಡೆದ ಸರಳ ಸಮಾರಂಭದಲ್ಲಿ ಕೆಎಲ್ ರಾಹುಲ್ ಅವರ ಕುಟುಂಬಸ್ಥರ ಹಾಗೂ ಆಪ್ತರು ಮಾತ್ರ ಭಾಗವಹಿಸಿದ್ದರು. ಈ ಶುಭಘಳಿಗೆಯಲ್ಲಿ ಟೀಮ್ ಇಂಡಿಯಾದ ಕೆಲ ಕ್ರಿಕೆಟಿಗರು ಕೂಡ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಈ ವರದಿ ಬೆನ್ನಲ್ಲೇ ಇದೀಗ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೆಎಲ್ ರಾಹುಲ್ ಅವರಿಗೆ ನೀಡಿದ ಮದುವೆ ಉಡುಗೊರೆ ಕೂಡ ಚರ್ಚೆಗೀಡಾಗಿದೆ.

ಹೌದು, ಕೆಎಲ್ ರಾಹುಲ್ ಅವರಿಗೆ ಧೋನಿ ಬರೋಬ್ಬರಿ 80 ಲಕ್ಷ ರೂ. ಮೌಲ್ಯದ ಕವಾಸಕಿ ನಿಂಜಾ ಸ್ಪೋರ್ಟ್ಸ್ ಬೈಕ್ ಅನ್ನು ಗಿಫ್ಟ್ ನೀಡಿದ್ದಾರೆ ಎಂದು ವರದಿಯಾಗಿದೆ.

ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ಕೆಎಲ್ ರಾಹುಲ್ ಹಲವು ಪಂದ್ಯಗಳಲ್ಲಿ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಅದರಲ್ಲೂ ಧೋನಿ ವಿಕೆಟ್ ಕೀಪರ್ ಆಗಿದ್ದರೂ, ರಾಹುಲ್ ಅವರಿಗೆ ಆರಂಭಿಕ ಬ್ಯಾಟರ್ ಆಗಿ ತಂಡದಲ್ಲಿ ಅವಕಾಶ ಕಲ್ಪಿಸಲಾಗಿತ್ತು.

ಖುದ್ದು ಬೈಕ್ ಪ್ರಿಯರಾಗಿರುವ ಧೋನಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ 30 ವರ್ಷದ ಕೆಎಲ್ ರಾಹುಲ್ಗೆ ದುಬಾರಿ ಬೈಕ್ ಗಿಫ್ಟ್ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಮತ್ತೊಂದೆಡೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೆಎಲ್ ರಾಹುಲ್ ಹಾಗೂ ಆಥಿಯಾ ಶೆಟ್ಟಿಗೆ 2.17 ಬೆಲೆಯ BMW ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.

ಒಟ್ಟಿನಲ್ಲಿ ಜೀವನದಲ್ಲಿ ಹೊಸ ಇನಿಂಗ್ಸ್ ಆರಂಭಿಸಿರುವ ಕೆಎಲ್ ರಾಹುಲ್ಗೆ ಸಹ ಆಟಗಾರರಿಂದಲೇ ಕೋಟಿ ಬೆಲೆಯ ಉಡುಗೊರೆಗಳು ಸಿಕ್ಕಿರುವುದು ವಿಶೇಷ.