Updated on: Jun 07, 2023 | 7:39 PM
Namibia vs Karnataka: ವಿಂಡ್ಹೋಕ್ನ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ನಮೀಬಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಕರ್ನಾಟಕ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರವಿಕುಮಾರ್ ಸಮರ್ಥ್ ಫೀಲ್ಡಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ನಮೀಬಿಯಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಶಾನ್ ಫೌಷೆಯನ್ನು ಹಾಗೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೈಕೆಲ್ ವ್ಯಾನ್ ಲಿಂಗನ್ರನ್ನು 6ನೇ ಓವರ್ನಲ್ಲಿ ವಿಜಯಕುಮಾರ್ ವೈಶಾಕ್ ಔಟ್ ಮಾಡಿ ಕರ್ನಾಟಕಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು.
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಝೇನ್ ಗ್ರೀನ್ 72 ಎಸೆತಗಳಲ್ಲಿ 3 ಫೋರ್ ಹಾಗೂ 2 ಸಿಕ್ಸ್ನೊಂದಿಗೆ ಅಜೇಯ 65 ರನ್ ಬಾರಿಸಿದರು. ಇನ್ನು ಗ್ರೀನ್ಗೆ ಸಾಥ್ ನೀಡಿದ ಬೆರ್ನಾಡ್ 6 ಭರ್ಜರಿ ಸಿಕ್ಸ್ನೊಂದಿಗೆ 49 ಎಸೆತಗಳಲ್ಲಿ 59 ರನ್ ಸಿಡಿಸಿದರು. ಇದಾಗ್ಯೂ ಕೆಲ ಕ್ರಮಾಂಕದಲ್ಲಿ ಕುಸಿತ ಕಂಡ ನಮೀಬಿಯಾ ತಂಡವು 45.1 ಓವರ್ಗಳಲ್ಲಿ 226 ರನ್ಗಳಿಸಿ ಸರ್ವಪತನ ಕಂಡಿತು.
ಕರ್ನಾಟಕ ಪರ ಶುಭಾಂಗ್ ಹೆಗ್ಡೆ 10 ಓವರ್ಗಳಲ್ಲಿ 44 ರನ್ ನೀಡಿ 3 ವಿಕೆಟ್ ಪಡೆದರೆ, ವಿಜಯಕುಮಾರ್ ವೈಶಾಕ್ 2 ವಿಕೆಟ್ ಕಬಳಿಸಿದರು. ಇನ್ನು ನಿಕಿನ್ ಜೋಸ್ ಹಾಗೂ ರಿಷಿ ಬೋಪಣ್ಣ ತಲಾ 1 ವಿಕೆಟ್ ಪಡೆದರು.
ಈ ಮೊತ್ತವನ್ನು ಬೆನ್ನತ್ತಿದ ಕರ್ನಾಟಕ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ರವಿಕುಮಾರ್ ಸಮರ್ಥ್ (3) ಬೇಗನೆ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಜೊತೆಯಾದ ಎಲ್ಆರ್ ಚೇತನ್ ಹಾಗೂ ನಿಕಿನ್ ಜೋಸ್ ಅತ್ಯುತ್ತಮ ಇನಿಂಗ್ಸ್ ಆಡಿದರು.
ಆರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಈ ಜೋಡಿ ನಿಧಾನವಾಗಿ ಬಿರುಸಿನ ಆಟಕ್ಕೆ ಒತ್ತು ನೀಡಿದರು. ಅದರಲ್ಲೂ ಎಲ್ಆರ್ ಚೇತನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ನಮೀಬಿಯಾ ಬೌಲರ್ಗಳ ಬೆಂಡೆತ್ತಿದರು.
ಪರಿಣಾಮ 25 ಓವರ್ ವೇಳೆಗೆ ಕರ್ನಾಟಕ ತಂಡದ ಮೊತ್ತ 150 ರ ಗಡಿ ತಲುಪಿತು. ಇತ್ತ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಚೇತನ್ 15 ಫೋರ್ ಹಾಗೂ 1 ಭರ್ಜರಿ ಸಿಕ್ಸ್ನೊಂದಿಗೆ ಕೇವಲ 92 ಎಸೆತಗಳಲ್ಲಿ ಸ್ಪೋಟಕ ಸೆಂಚುರಿ ಸಿಡಿಸಿದರು.
ಮತ್ತೊಂದೆಡೆ ನಿಕಿನ್ ಜೋಸ್ 90 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 6 ಫೋರ್ನೊಂದಿಗೆ ಶತಕ ಪೂರೈಸಿದರು. ಅಲ್ಲದೆ 225 ರನ್ಗಳ ಭರ್ಜರಿ ಜೊತೆಯಾಟವಾಡಿದರು. ಚೇತನ್ ಅಜೇಯ 120 ರನ್ ಬಾರಿಸಿದರೆ, ನಿಕಿಕ್ ಅಜೇಯ 101 ರನ್ಗಳಿಸಿದರು. ಅದರಂತೆ ಕರ್ನಾಟಕ ತಂಡವು 33.4 ಓವರ್ಗಳಲ್ಲಿ 227 ರನ್ಗಳಿಸಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ವಿಶೇಷ ಎಂದರೆ ಇದಕ್ಕೂ ಮುನ್ನ ನಮೀಬಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ನಿಕಿನ್ ಜೋಸ್ (103) ಹಾಗೂ ಎಲ್ಆರ್ ಚೇತನ್ (169) ಶತಕ ಬಾರಿಸಿದ್ದರು. ಇದೀಗ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿ ಯುವ ದಾಂಡಿಗರಿಬ್ಬರು ಮಿಂಚಿದ್ದಾರೆ.