
ಇದೇ ಅಕ್ಟೋಬರ್ 19 ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಯೊಂದಿಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕೂಡ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇವರಿಬ್ಬರ ಅಭಿಮಾನಿಗಳು ಇವರ ಆಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಅಲ್ಲದೆ ನಾಯಕತ್ವವನ್ನು ಕಳೆದುಕೊಂಡಿರುವ ರೋಹಿತ್ ಶರ್ಮಾ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ನೋಡಲು ಎಲ್ಲರೂ ಕಾತುರರಾಗಿದ್ದಾರೆ.

ಹಾಗೆಯೇ ಇದರ ಜೊತೆಗೆ ಇದು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ವೃತ್ತಿಜೀವನದ ಕೊನೆಯ ಸರಣಿಯಾಗಿರಬಹುದು ಎಂದು ಕೆಲವರು ಹೇಳುತ್ತಿದ್ದಾರೆ. ಇದನ್ನು ಇಬ್ಬರೂ ಆಟಗಾರರಿಗೆ ವಿದಾಯ ಸರಣಿ ಎಂದು ಕರೆಯಲಾಗುತ್ತಿದೆ. ಆದರೆ, ಈ ಎಲ್ಲಾ ಊಹಾಪೋಹಗಳ ನಡುವೆ ಇವರಿಬ್ಬರ ಪ್ರದರ್ಶನದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಏಕೆಂದರೆ ಇವರಿಬ್ಬರು ಇಷ್ಟಪಡುವ ಅಕ್ಟೋಬರ್ ತಿಂಗಳಿನಲ್ಲಿ ಏಕದಿನ ಸರಣಿ ನಡೆಯುತ್ತಿದೆ.

ಏನಿದು ಅಕ್ಟೋಬರ್ ತಿಂಗಳ ಮರ್ಮ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಅದಕ್ಕೆ ಉತ್ತರ, ರೋಹಿತ್ ಶರ್ಮಾ 19 ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದರೆ, ವಿರಾಟ್ ಕೊಹ್ಲಿ 17 ವರ್ಷಗಳಿಂದ ಆಡುತ್ತಿದ್ದಾರೆ. ಇಷ್ಟು ವರ್ಷಗಳ ವೃತ್ತಿಜೀವನದಲ್ಲಿ ಇವರು ಆಡಿದ ಎಲ್ಲಾ ದೊಡ್ಡ ಇನ್ನಿಂಗ್ಸ್‌ಗಳಲ್ಲಿ ಅತಿ ಹೆಚ್ಚಿನ ದೊಡ್ಡ ಇನ್ನಿಂಗ್ಸ್ಗಳು ಅಕ್ಟೋಬರ್‌ನಲ್ಲಿ ಮೂಡಿಬಂದಿವೆ.

2006 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರೋಹಿತ್ ಶರ್ಮಾ ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ 49 ಶತಕಗಳನ್ನು ಬಾರಿಸಿದ್ದಾರೆ. ಅವುಗಳಲ್ಲಿ ಬರೋಬ್ಬರಿ 11 ಶತಕಗಳು ಅಕ್ಟೋಬರ್ ತಿಂಗಳಲ್ಲಿ ಸಿಡಿದಿವೆ.

ವಿರಾಟ್ ಕೊಹ್ಲಿ ವಿಷಯದಲ್ಲೂ ಇದೇ ಆಗಿದೆ. 2008 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಕೊಹ್ಲಿ ಇದುವರೆಗೆ 82 ಶತಕಗಳನ್ನು ಗಳಿಸಿದ್ದಾರೆ. ಇವುಗಳಲ್ಲಿ ಡಿಸೆಂಬರ್, ಜನವರಿ ಮತ್ತು ಫೆಬ್ರವರಿಯಲ್ಲಿ ತಲಾ 11 ಶತಕಗಳನ್ನು ಗಳಿಸಿದ್ದಾರೆ. ಉಳಿದಂತೆ ಅಕ್ಟೋಬರ್‌ನಲ್ಲಿ ಅತಿ ಹೆಚ್ಚು ಅಂದರೆ 16 ಶತಕಗಳು ಸಿಡಿದಿವೆ.

ಕಾಕತಾಳೀಯವೆಂಬಂತೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಅಕ್ಟೋಬರ್ 19 ರಂದು ಪ್ರಾರಂಭವಾಗುತ್ತದೆ. ಮೊದಲ ಪಂದ್ಯ ಪರ್ತ್‌ನಲ್ಲಿ ನಡೆಯಲಿದೆ. ಎರಡನೇ ಏಕದಿನ ಪಂದ್ಯ ಅಕ್ಟೋಬರ್ 23 ರಂದು ಅಡಿಲೇಡ್‌ನಲ್ಲಿ ನಡೆಯಲಿದೆ. ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ನಡೆಯಲಿದೆ. ಹೀಗಾಗಿ ಅಕ್ಟೋಬರ್ ತಿಂಗಳಿನಲ್ಲಿನ ಅದ್ಭುತ ಪ್ರದರ್ಶನವನ್ನು ಇವರಿಬ್ಬರು ಹೀಗೆ ಮುಂದುವರೆಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.