ಟಿ20 ಕ್ರಿಕೆಟ್ನಲ್ಲಿ ಹೊಸ ಚರಿತ್ರೆ: ಪೂರನ್ ಪವರ್ಗೆ ಹಳೆಯ ದಾಖಲೆ ಉಡೀಸ್
Nicholas Pooran Records: ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದೇ ವರ್ಷ ಅತ್ಯಧಿಕ ಸಿಕ್ಸ್ ಬಾರಿಸಿದ ವಿಶ್ವ ದಾಖಲೆ ಇದೀಗ ನಿಕೋಲಸ್ ಪೂರನ್ ಪಾಲಾಗಿದೆ. ಇದಕ್ಕೂ ಮುನ್ನ ಈ ವರ್ಲ್ಡ್ ರೆಕಾರ್ಡ್ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. ಆದರೆ 2024 ರಲ್ಲಿ ಸಿಕ್ಸ್ಗಳ ಸುರಿಮಳೆಗೈಯ್ಯುವ ಮೂಲಕ ವಿಂಡೀಸ್ ದಾಂಡಿಗ ಹೊಸ ಇತಿಹಾಸ ನಿರ್ಮಿಸಿದ್ದಾರೆ.
1 / 5
ಕೆರಿಬಿಯನ್ ಪ್ರೀಮಿಯರ್ ಲೀಗ್ನ 25ನೇ ಪಂದ್ಯದಲ್ಲಿ ಎಡಗೈ ದಾಂಡಿಗ ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ವಿರುದ್ಧದ ಈ ಪಂದ್ಯದಲ್ಲಿ ಟ್ರಿನ್ಬಾಗೊ ನೈಟ್ ರೈಡರ್ಸ್ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪೂರನ್ 43 ಎಸೆತಗಳಲ್ಲಿ ಅಜೇಯ 93 ರನ್ ಚಚ್ಚಿದ್ದರು.
2 / 5
ಈ 93 ರನ್ಗಳಲ್ಲಿ ನಿಕೋಲಸ್ ಪೂರನ್ ಬ್ಯಾಟ್ನಿಂದ ಮೂಡಿಬಂದ ಸಿಕ್ಸ್ಗಳ ಸಂಖ್ಯೆ 7. ಈ ಏಳು ಸಿಕ್ಸ್ಗಳೊಂದಿಗೆ ವಿಂಡೀಸ್ ದಾಂಡಿಗ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ಸಾರ್ವಕಾಲಿಕ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಅದು ಸಹ ಈ ವರ್ಷ ಸಿಕ್ಸ್ಗಳ ಸುರಿಮಳೆಗೈಯ್ಯುವ ಮೂಲಕ ಎಂಬುದು ವಿಶೇಷ.
3 / 5
ಅಂದರೆ ವರ್ಷವೊಂದರಲ್ಲಿ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆ ಯುನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. 2015 ರಲ್ಲಿ ಗೇಲ್ ಒಟ್ಟು 135 ಸಿಕ್ಸ್ಗಳನ್ನು ಸಿಡಿಸುವ ಮೂಲಕ ಈ ವಿಶ್ವ ದಾಖಲೆ ನಿರ್ಮಿಸಿದ್ದರು.
4 / 5
ಇದೀಗ 9 ವರ್ಷಗಳ ಬಳಿಕ ಈ ದಾಖಲೆಯನ್ನು ಉಡೀಸ್ ಮಾಡುವಲ್ಲಿ ನಿಕೋಲಸ್ ಪೂರನ್ ಯಶಸ್ವಿಯಾಗಿದ್ದಾರೆ. 2024 ರಲ್ಲಿ 64 ಪಂದ್ಯಗಳನ್ನಾಡಿರುವ ಪೂರನ್ ಒಟ್ಟು 151 ಸಿಕ್ಸ್ಗಳನ್ನು ಸಿಡಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಒಂದೇ ವರ್ಷ 150+ ಸಿಕ್ಸ್ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
5 / 5
ಸದ್ಯ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಣಕ್ಕಿಳಿಯುತ್ತಿರುವ ಪೂರನ್ ಈ ವರ್ಷದೊಳಗೆ ಮತ್ತಷ್ಟು ಟಿ20 ಪಂದ್ಯಗಳನ್ನಾಡಲಿದ್ದಾರೆ. ಹೀಗಾಗಿ ಈ ವರ್ಷ ಪೂರನ್ ಬ್ಯಾಟ್ನಿಂದ ಮತ್ತಷ್ಟು ಸಿಕ್ಸರ್ಗಳ ಸುರಿಮಳೆಯನ್ನು ನಿರೀಕ್ಷಿಸಬಹುದು.